ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
47

ಆದರೆ - ಒಂದು ಅಂಶವನ್ನಿಲ್ಲಿ ಪ್ರಸ್ತಾವಿಸಬಹುದು. ಮಾತು ಅಥವಾ ಶಾಬ್ದಿಕ ಭಾಷೆ ಎಂಬುದು ಹೆಚ್ಚು ಸಾರ್ವತ್ರಿಕವಾದುದು, ದಿನಬಳಕೆಯದು. ಆದುದರಿಂದ ಯಕ್ಷಗಾನದ ಮುಖ್ಯ ಪ್ರದೇಶದಲ್ಲಿ, ರಂಗಪ್ರಕಾರವೆಂಬ ಹೆಸರಲ್ಲಿ, ಮಾತನ್ನು ಕಡೆಗಣಿಸಿದರೆ, ಪ್ರದರ್ಶನವು ಕಳೆಗೂಡುವುದಿಲ್ಲ ಎಂಬುದು ನಿಜ. ಯಕ್ಷಗಾನದ ಒಳ್ಳೆಯ ನಟರಲ್ಲಿ ಮಾತುಗಾರಿಕೆಯು ಸಾಮಾನ್ಯ ಮಟ್ಟದಲ್ಲಿದ್ದರೆ, ಪಾತ್ರ ನಿರ್ಮಾಣ ಮತ್ತು ರಂಗನಿರ್ವಹಣೆಯು ಕಳೆಗುಂದುವುದು ನೋಟಕರ ಅನುಭವ. ಅಂದರೆ ಒಳ್ಳೆಯ ನಟ - ನರ್ತಕನಾದ ಯಕ್ಷಗಾನ ಕಲಾವಿದನು, ಮಾತುಗಾರಿಕೆಯಲ್ಲಿ ಸಾಮಾನ್ಯ ಮಟ್ಟದವನಾದರೆ, ಅದು ಕೊರತೆಯೆಂದು ಪರಿಗಣಿತವಾಗುತ್ತದೆ. ಯಕ್ಷಗಾನದ ಶಿಕ್ಷಣ, ಪ್ರಶಿಕ್ಷಣಗಳಲ್ಲಿ ಮಾತುಗಾರಿಕೆಯ ಕುರಿತು ಉಳಿದ ಇತರ ವಿಭಾಗಗಳಷ್ಟು ಲಕ್ಷ್ಯ ವಹಿಸಲಾಗುವುದಿಲ್ಲ ಎಂಬ ಆಕ್ಷೇಪದಲ್ಲಿ ಸತ್ಯವಿದೆ. ಬೆಳೆದು ನಿಂತಿರುವ ಅರ್ಥಗಾರಿಕೆಯ ಪ್ರಯೋಜನವನ್ನು, ಅಂತೆಯ ಸಾಹಿತ್ಯದ ಗುಣಮಟ್ಟವನ್ನು, ಆಟಗಳೂ ಕಾಯ್ದುಳಿಸಿ ಬೆಳೆಸಬೇಕು.
ಯಕ್ಷಗಾನ ಪ್ರದರ್ಶನವೆಂಬ ಸಮಗ್ರ ಕಲಾಕೃತಿಗೆ, ಒಳ್ಳೆಯ ಮಾತುಗಾರಿಕೆಯೂ ಮುಖ್ಯ, ಕೆಲವೊಮ್ಮೆ ಬಹುಮುಖ್ಯ. ಮಾತಿನ ಗಾತ್ರ, ಪ್ರಮಾಣ ಎಷ್ಟೆ ಇರಲಿ, ಅದು ಸುಸಂಬದ್ಧವೂ, ಪುಷ್ಟವೂ, ಕಲಾತ್ಮಕವೂ ಆಗಿರಬೇಕೆಂಬುದು ನಿರ್ವಿವಾದ ವಿಚಾರ.
ಅಶಾಬ್ದಿಕ ಮತ್ತು ಶಾಬ್ದಿಕ ಅಂಶಗಳ , ಆಕೃತಿಗಳ ವ್ಯವಸ್ಥಿತ ಸಮನ್ವಯವೆ, ಒಳ್ಳೆಯ ಯಕ್ಷಗಾನ ಪ್ರದರ್ಶನದ ಸೂತ್ರ (ಮಾತೇ ಇಲ್ಲದ ಯಕ್ಷಗಾನವೂ ಸಫಲಗೊಳ್ಳಬಹುದು ಅದು ಬೇರೆ ವಿಚಾರ).
ಮಾತು ಎಂದರೆ ಎಂತಹ ಮಾತು ? ಅದು ವಾಚಿಕಾಭಿನಯವೂ ಆಗಬೇಕೆಂಬುದನ್ನೂ ಕಲಾವಿದರು ಗಮನಿಸಬೇಕು.



ಉದ್ಯಾವರ ಮಾಧವಾಚಾರ್ಯರ 'ಉಪನಿಷದುದ್ಯಾನಂ' ಇತ್ತೀಚಿನ ಒಂದು ಉದಾಹರಣೆ.

* ಡಾ. ಎಂ. ಪ್ರಭಾಕರ ಜೋಶಿ