ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
55

ಇರಬೇಕು. ಹಲವು ಆರಂಭಿಕ ಪ್ರಸಂಗಗಳ ಸ್ವರೂಪವು ಈ ವಿಚಾರವನ್ನು ಸ್ಪಷ್ಟಪಡಿಸುತ್ತದೆ. ಬರಬರುತ್ತ ಪ್ರಸಂಗಗಳು ರಂಗಕ್ಕೆ ಸರಿಹೊಂದುವಂತೆ ರಚಿಸಲ್ಪಡುತ್ತ ಬಂದುವಾದರೂ, ಇಂದಿಗೂ ಪ್ರಸಂಗಗಳಲ್ಲಿ ಅದರ ಮೂಲಗುಣವಾದ ಕಥನಾತ್ಮಕ ರೂಪವು ಉಳಿದು ಬಂದಿದೆ. ಇದು ಪರಂಪರೆಯ ಪ್ರಭಾವದ ದ್ಯೋತಕವಾಗಿದೆ. ಅಂತೂ ಪ್ರಸಂಗ ಸಾಹಿತ್ಯವು ಪ್ರದರ್ಶನಗಳಿಂದ ಉಳಿದು ಬೆಳೆಯಿತು. ತದನುಸಾರವಾದ ವಿಕಾಸವನ್ನೂ ಹೊಂದಿತು. ತೆಲುಗು, ತಮಿಳು ಯಕ್ಷಗಾನಗಳೂ ಇದೇ ರೀತಿಯ ಇತಿಹಾಸವನ್ನು ಹೊಂದಿವೆ. ಆಧುನಿಕ ಕಾಲದ ಸಾಮಾನ್ಯ ಮಟ್ಟದ ಪ್ರಸಂಗವೂ ಕೂಡ ಪ್ರದರ್ಶನದ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ರಂಗಧೋರಣೆ ಹೊಂದಿರುವುದು ಕಾಣುತ್ತದೆ. ಪ್ರದರ್ಶನವನ್ನು ಉದ್ದೇಶಿಸಿಯೇ ಅದು ರಚಿತವಾಗುವುದೆ ಅದಕ್ಕೆ ಕಾರಣವಾಗಿದೆ. ಹೀಗೆ, ಪ್ರಸಂಗ ಸಾಹಿತ್ಯವು ಸಾಮಾನ್ಯವಾದ ವಾಚನ-ಗಾಯನ ಕಾವ್ಯದ ರಚನೆಯಿಂದ, ರಂಗೋದ್ದಿಷ್ಟ ರಚನೆಯ ಕಡೆ ಸಾಗಿರುವುದು ಸ್ಪಷ್ಟ.

-2-

ಪ್ರಸಂಗಗಳ ರಚನೆಯೆಂಬುದೆ, ನಮ್ಮ ಸಾಂಸ್ಕೃತಿಕ ವಿಧಾನದ, ಶಾಸ್ತ್ರೀಯ (ಕ್ಲಾಸಿಕಲ್) ಪರಂಪರೆಯ ಜನಪರ ವಿಸ್ತರಣ, ಉಪದೇಶಾತ್ಮಕವಾದ ಶಾಸ್ತ್ರ ಮೊದಲಾದುವುಗಳು ಸುಲಭವಾಗಿ ಅರ್ಥವಾಗಲು, ಜೀವನಾನುಭವಕ್ಕೆ ಒದಗಲು ಅನುಕೂಲವಾಗಲೆಂದು ಕಾವ್ಯ-ಪುರಾಣಗಳ ಸೃಷ್ಟಿ, ಅವು ಅರ್ಥವಾಗದವರಿಗಾಗಿ ಪ್ರಾದೇಶಿಕ ಭಾಷೆಗಳಲ್ಲಿ ಕಾವ್ಯಗಳ ರಚನೆ, ಕಥಾ ಪರಂಪರೆಯ ನಿರ್ಮಾಣ. (ಉದಾ. - ಗದುಗು ಭಾರತ). ಅವೂ ತಲಪದಿದ್ದವರಿಗಾಗಿ ವಾಚನ, ಪ್ರವಚನ, ಹರಿಕಥೆ, ಯಕ್ಷಗಾನಗಳು. ಆಂದರೆ, ಅವುಗಳದ ಮುಂದುವರಿಕೆ. ಅದೇ ಸರಣಿಯಲ್ಲಿ ಆಟ ಕೂಟ ಮೊದಲಾದ ಕಲಾಪ್ರದರ್ಶನಗಳು ರೂಪುಗೊಂಡದ್ದು. ಹೀಗಾಗುವಾಗ, ಅಲ್ಲಲ್ಲಿ ಪರಿವರ್ತನ, ಸೇರ್ಪಡೆ, ಸರಳೀಕರಣ, ಪ್ರಕ್ಷೇಪಗಳ ಮೂಲಕ ಕೂಡು-ಕಳೆಗಳಾಗುತ್ತ ಬಂದದ್ದು ಸಹಜ ಪ್ರಕ್ರಿಯೆ. ಒಂದು ರೀತಿಯಿಂದ ಹೇಳುವುದಾದರೆ - ಸತತವಾದ ಪ್ರಕ್ಷೇಪಗಳೇ ಸಂಸ್ಕೃತಿಯ ಇತಿಹಾಸದ ನಡೆಯ ಹೆಜ್ಜೆಗಳು, ಮಾನವನಿರ್ಮಿತವೆಲ್ಲವೂ ಪ್ರಕ್ಷೇಪಮಯ, ಪ್ರಕಾರಗಳು ವಿವಿಧವಾಗಿದ್ದು, ಒಂದೊಂದೂ ಹಲವು ಪ್ರಭೇದಗಳಿಂದ ಕೂಡಿರುತ್ತದೆ. ಆದುದರಿಂದ ಯಾವುದೇ ರಚನೆಯಲ್ಲಿ ಕೂಡು, ಕಳೆಗಳ ಸಾಧುತ್ವವು ಪ್ರಶ್ನಾತೀತ, ಅಂದರೆ 'ಪ್ರಕ್ಷೇಪ'ವನ್ನು ಆಕ್ಷೇಪಿಸುವಂತಿಲ್ಲ. ಯಾವ ಪ್ರಕ್ಷೇಪವು ಸರಿ, ಯಾವುದು ಸರಿಯಲ್ಲ, ಯಾವುದು ಕಲಾತ್ಮಕ, ಯಾವುದು ಅಲ್ಲ ಎಂದು ಬೇಕಾದರೆ ಚರ್ಚಿಸಬಹುದು, ಅಷ್ಟೆ.

ಡಾ. ಎಂ. ಪ್ರಭಾಕರ ಜೋಶಿ