ಈ ಪುಟವನ್ನು ಪ್ರಕಟಿಸಲಾಗಿದೆ

78

ಮುಡಿ

ಸತ್ಯಾಂಶ ಇದೆ. ಆದರೂ, ಪ್ರಕಾರಗಳ ಮೂಲ ಶೋಧನೆಯು ನಿರರ್ಥಕವೆನ್ನುವಂತಿಲ್ಲ. ಅದರಿಂದಾಗಿ ತಮ್ಮ ಒಟ್ಟು ಅರಿವು ವಿಸ್ತರಿಸುತ್ತದೆ. ಕೇವಲ ಒಂದು ಕಾಲದ ಒಂದು ಸ್ಥಿತಿಯನ್ನು, ಒಂದು ಪ್ರದೇಶವನ್ನು ಗಮನಿಸಿ, ತೀರ್ಮಾನ ನೀಡುವ ಪ್ರವೃತ್ತಿ ಮರೆಯಾಗಿ, ವಿಸ್ತಾರವಾದ ಪರಿಶೀಲನೆಗೆ ಇಂಬಾಗುತ್ತದೆ. ಒಂದು ಪ್ರಕಾರವು ಎಲ್ಲೋ ಹುಟ್ಟಿ ಎಲ್ಲಿಗೋ ಸಾಗಿ ರೂಪ ರೂಪಾಂತರ ಹೊಂದಿದ ಬಗೆ ನಮ್ಮ ಕಣ್ಣು ತೆರೆಸುತ್ತದೆ. ದೃಷ್ಟಿಯನ್ನು ತಿಳಿಗೊಳಿಸುತ್ತದೆ. ವಿಮರ್ಶೆಗೆ ಅಡಿಪಾಯ ಒದಗಿಸುತ್ತದೆ. ಆದುದರಿಂದ ಮೂಲ ಶೋಧನೆಯ ಪ್ರಯತ್ನವು ವ್ಯರ್ಥವಲ್ಲ, ಲಾಭದಾಯಕವೇ ಆಗಿದೆ.
ತೊಡಕಿನ ಕೆಲಸ
ಸಂಸ್ಕೃತಿ ಶಾಸ್ತ್ರದ, ಸಂಸ್ಕೃತಿ ವಿಶ್ಲೇಷಣೆಯ ಒಂದು ಅಂಗ, ಮೂಲಗಳ ಹುಡುಕಾಟ. ಇದು ಕೆಲವೊಮ್ಮೆ ಸರಳವಾಗಿರಬಹುದು, ಆದರೆ ಬಹುತೇಕ ಅದು ತುಂಬ ತೊಡಕಿನ, ಸಿಕ್ಕು ಸಿಕ್ಕಾದ ಸಂಗತಿಯ ವಿಷಯವಾಗಿದೆ. ಕೆಲವರು ಹೇಳುವಂತೆ, ಮೂಲ ಶೋಧನೆ ಮತ್ತು ಪ್ರಭಾವಗಳ ಪರಿಶೀಲನೆಯು ಕಲಾ ವಿಶ್ಲೇಷಣೆಯ ಅತಿ ಕಠಿಣವಾದ ಭಾಗವಾಗಿರುತ್ತದೆ. ವಿವರಗಳು, ಶಬ್ದಗಳು, ನಮ್ಮನ್ನು ದಾರಿ ತಪ್ಪಿಸುತ್ತವೆ. ಒಂದು ಬಗೆಯ ಅಂಶವನ್ನು ಹಿಡಿದು ಒಂದು ಅಭಿಪ್ರಾಯಕ್ಕೆ ಬರುವಾಗ, ತದ್ವಿರುದ್ಧವಾದ ಇನ್ನೊಂದು ವಿವರ ಕಾಣಿಸುತ್ತದೆ. ಪ್ರಾಚೀನ ಯಾವುದು, ಪ್ರಕ್ಷೇಪ ಯಾವುದು ಎಂಬುದೇ ತಿಳಿಯದಾಗಿ, ತಿರುವು ಮುರುವಾಗಿ ಗೊಂದಲ ಉಂಟಾಗುತ್ತದೆ. ಇದನ್ನೆಲ್ಲ ಬಿಡಿಸಿ ಮುಂದೆ ಹೋದರೂ, ಶೂನ್ಯ ಸಂಪಾದನೆಗೆ ಬಂದು ನಿಲ್ಲಲೂ ಬಹುದು, ಫಲಿತ ದೊರೆಯಲೂಬಹುದು. ಏನಿದ್ದರೂ ಆ ಅನುಭವ ಸಾಮಾನ್ಯವಲ್ಲ, ಅದು ಬಹು ಪ್ರಬೋಧಕ, ರೋಚಕ.
ವಸ್ತು ಮೂಲವೆಂಬುವುದು ಕೆಲವೊಮ್ಮೆ ತೀರ ಸರಳ, ಕೆಲವೊಮ್ಮೆ ಗಹನವಾಗಿರಬಹುದು. ಉದಾ: ನಮ್ಮ ದೇಶಕ್ಕೆ ಕಸಿ ಮಾವಿನ ಬಳಕೆ ಬಂದದ್ದು ಪೋರ್ಚುಗೀಸರಿಂದ, ಅಥವಾ ಮೋಟಾರು ಕಾರು ಬಂದದ್ದು ಯುರೋಪಿನಿಂದ ಎಂದು ಹೇಳಿದರೆ ವಿವಾದವಿಲ್ಲ. ಅದು ನೇರ, ಸ್ಪಷ್ಟ. ಆದರೆ, ಬೇರೆ ಎಷ್ಟೋ ವಿಷಯಗಳಲ್ಲಿ, ವಿಶೇಷತಃ ಸಾಂಸ್ಕೃತಿಕ ಕಲಾಪ್ರಕಾರಗಳ ವಿಷಯದಲ್ಲಿ ಇಷ್ಟು ಸ್ಪಷ್ಟ ಉತ್ತರಗಳಿಲ್ಲ. ಹಲವು ಊಹೆಗಳೂ, ಸಿದ್ಧಾಂತಗಳೂ ಬರುತ್ತವೆ. ಕೆಲವೊಮ್ಮೆ, ವಿಶೇಷತಃ ಈಚಿನ ದಿನಗಳಲ್ಲಿ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಭಾವನೆಯಿಂದಾಗಿ, ಮೂಲವನ್ನು ಒಂದು ಕಡೆಗೆ ಎಳೆದು

ಡಾ. ಎಂ. ಪ್ರಭಾಕರ ಜೋಶಿ