ಈ ಪುಟವನ್ನು ಪ್ರಕಟಿಸಲಾಗಿದೆ

ಅಲ್ಲಿ ವೈಶಿಷ್ಟ್ಯವೇನಿದ್ದರೂ ಬಂಧಗಳ ಪದ ಪ್ರಯೋಗಗಳ ಮತ್ತು ರಂಗ ಅನ್ವಯದ ವಿಷಯಗಳಲ್ಲಿ. ಹೀಗಾಗಿ ಪಾರ್ತಿಸುಬ್ಬನ ರಚನೆಗಳಿಂದ ತೊಡಗಿ, ಜತ್ತಿ ಈಶ್ವರ ಭಾಗವತರ ರಚನೆಗಳ ವರೆಗೂ ಹಿಂದಿನ ಕಾವ್ಯವನ್ನೇ ಹೆಚ್ಚು ಕಡಿಮೆ ತದ್ವತ್ತಾಗಿ ಅನುಸರಿಸಿ, ಕತೆಯನ್ನು ಹಾಡುಗಳಾಗಿ ಪ್ರಸಂಗರೂಪದಲ್ಲಿ ಬರೆದುದು ಕಾಣುತ್ತದೆ. ಪಾರ್ತಿಸುಬ್ಬನಿಗೆ ತೊರವೆ ರಾಮಾಯಣ ಮತ್ತು ಕಥಕ್ಕಳಿ ರಾಮಾಯಣಗಳು ಆಕರಗಳು. ರಾಮಾಯಣ ಪ್ರಸಂಗಗಳನ್ನು ಬರೆದ ಹೆಚ್ಚಿನ ಯಕ್ಷಗಾನದ ಕವಿಗಳಿಗಳು ತೊರವೆಯನ್ನು ಅನುಸರಿಸಿದ್ದಾರೆ. ಅದೇ ರೀತಿ ಯಕ್ಷಗಾನ ಮಹಾಭಾರತ ಪ್ರಸಂಗಗಳಲ್ಲಿ ಹಲವಕ್ಕೆ ಕುಮಾರವ್ಯಾಸ ಭಾರತವು ಆಕರ. ಪಾಂಡವಾಶ್ವಮೇಧ ಪ್ರಸಂಗಗಳಿಗೆ ಲಕ್ಷ್ಮೀಶನ ಜೈಮಿನಿ ಭಾರತವು ನೇರ ಆಧಾರ, ಆಕರ. ಇದೇ ಪರಂಪರೆಯಲ್ಲಿರುವ ಕೃಷ್ಣ ಸಂಧಾನವು ಮುಖ್ಯವಾಗಿ ಕುಮಾರವ್ಯಾಸ ಭಾರತದ ಸಂಗ್ರಹಾನುವಾದದಂತಿದೆ'.
ಜೋಶಿಯವರ ಈ ಮಾತುಗಳನ್ನು ಆಧರಿಸಿ ಇಡೀ ಕನ್ನಡ ಸಾಹಿತ್ಯಚರಿತ್ರೆಯನ್ನೇ ಹೊಸದಾಗಿ ಬರೆಯಲು ಸಾಧ್ಯವುಂಟು. ಹಳಗನ್ನಡ (ರನ್ನನ ಗದಾಯುದ್ಧಂ), ನಡುಗನ್ನಡ (ಗದುಗಿನ ಭಾರತ) ಮತ್ತಿತರ ಪಠ್ಯಗಳನ್ನು ಯಕ್ಷಗಾನ ಪ್ರಸಂಗಗಳಾಗಿ ಮಾರ್ಪಡಿಸಿದಾಗ ಕಲಾವಿದರಿಗೆ ಪುರಾಣ ಪಾತ್ರಗಳನ್ನು ರಂಗದ ಮೇಲೆ ಅಭಿನಯಿಸುವ ಅವಕಾಶ ಲಭಿಸಿತು. ಚಂಡೆ ಮದ್ದಳೆ ಭಾಗವತಿಕೆಗಳ ಜೊತೆಗೆ ಕರ್ನಾಟ ಭಾರತ ಕಥಾಮಂಜರಿ, ತೊರವೆ ರಾಮಾಯಣ ಮೊದಲಾದ ಕಾವ್ಯಗಳ ಪಾತ್ರಗಳು

ಬಣ್ಣ, ಕುಣಿತ, ವೇಷಭೂಷಣ ಮತ್ತು ಸೃಜನಶೀಲ ಮಾತುಗಾರಿಕೆಯ ಮೂಲಕ ರಂಗಭೂಮಿಗೆ ಬಂದಾಗ ನೋಡುಗರಿಗೆ ಕುಣಿಯುವ ಕನ್ನಡ ಕಾವ್ಯಗಳು ಕಣ್ಣಿಗೆ ಬಿದ್ದುವು. ಜಾತಿ ಮತಗಳ ಬೇಧವಿಲ್ಲದೆ ಅವುಗಳನ್ನು ಲಕ್ಷಾಂತರ ಜನ ನೋಡುವಂತಾಯಿತು. ಯಕ್ಷಗಾನದ ಇನ್ನೊಂದು ಪ್ರಕಾರವಾದ ತಾಳಮದ್ದಳೆಯಲ್ಲಿ ಕಲಾವಿದರು ಭಾಗವತರ ಹಾಡಿಗೆ ಕುಳಿತು ಅರ್ಥ ಹೇಳುತ್ತಾರೆ. ಯಕ್ಷಗಾನ ಕಲಾವಿದರನೇಕರು ತೊರವೆ ರಾಮಾಯಣದ ಪದ್ಯಗಳನ್ನೋ, ಕುಮಾರವ್ಯಾಸ ಭಾರತದ ಪದ್ಯಗಳನ್ನೋ ಎಲ್ಲೆಂದರಲ್ಲಿ ಗುನುಗುನುಸಿಕೊಂಡು ಓಡಾಡುತ್ತಿರುವುದನ್ನು ಯಾರಾದರೂ ಗಮನಿಸಬಹುದು. ಯಕ್ಷಗಾನ ಪ್ರಸಂಗಗಳ ಮೂಲಕ ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳು ಸಾಮಾನ್ಯ ಜನರಿಗೆ ತಲುಪಿದ ರೀತಿ ಮಾತ್ರ ಅಸಾಮಾನ್ಯವಾದುದು. ಜೋಶಿಯವರು ಹಾಕಿಕೊಟ್ಟ ಹಾದಿಯಲ್ಲಿ ಹೊರಟು ಯಕ್ಷಗಾನ ಪ್ರಸಂಗಗಳಲ್ಲಿ ಮರು ಸೃಷ್ಟಿಗೊಂಡ ಕನ್ನಡ ಕಾವ್ಯಗಳ ಬಗೆಗೆ ಇನ್ನಷ್ಟು ಸೂಕ್ಷ್ಮವಾದ ಅಧ್ಯಯನ ನಡೆಯಬೇಕಾಗಿದೆ.
ಹೀಗೆ ಹಿರಿಯರಾದ ಡಾ. ಪ್ರಭಾಕರ ಜೋಶಿಯವರು ಕನ್ನಡ ಸಂಸ್ಕೃತಿಯ ಬಹರೂಪೀ ನೆಲೆಗಳನ್ನು ಗುರುತಿಸಿದ ದೊಡ್ಡ ವಿದ್ವಾಂಸ, ಅವರಿಗೆ ನಾವೆಲ್ಲಾ ಸದಾ ಋಣಿಗಳಾಗಿರುತ್ತವೆ. ಅವರ ಕಲೆಗಾರಿಕೆ, ವಿದ್ವತ್ತು, ಸ್ನೇಹಶೀಲತೆ ನಮಗೊಂದು ಆದರ್ಶ.

ಯಕ್ಷ ಪ್ರಭಾಕರ / 21