ಈ ಪುಟವನ್ನು ಪ್ರಕಟಿಸಲಾಗಿದೆ

ದೊರೆಯಿತಲ್ಲ ಎಂಬ ಹುಂಬ ಜಂಬದೊಳಗಿರುವಾಗ ನೆನಪಾದುದು ನಡುಗನ್ನಡದ ಕುಮಾರವ್ಯಾಸನ ಮಾತುಗಳು, ವ್ಯಾಸ ಭಾರತದ ಕತೆಯನ್ನು ಬರೆಯುವಾಗ 'ವ್ಯಾಸ ಮಹರ್ಷಿಗಳು ಈಜಿದ ವಚನಾಮೃತ ಸಾಗರವನ್ನು ನಾನು ಈಜುತ್ತಿದ್ದೇನೆ.' ಆದರೆ ಕವಿ ವ್ಯಾಸ ಎಂಬ ಗರ್ವ ನನಗಿಲ್ಲ ಎಂಬಂತೆ ಸಂಭ್ರಮದಿಂದ ಬರೆಯತೊಡಗಿದೆ.
ಡಾ. ಎಂ. ಪ್ರಭಾಕರ ಜೋಶಿ ನನ್ನ ಆತ್ಮೀಯ ಮಿತ್ರರು. ಕಳೆದ ನಲ್ವತ್ತು ವರ್ಷಗಳಿಂದ ಅವರ ಸಾಮೀಪ್ಯ ನನಗೆ ಸಿಕ್ಕಿದೆ. ಶೇಣಿ, ಕುಂಬಳೆ, ಸಾಮಗರಂತಹ ಹಿರಿಯರೊಂದಿಗೆ ತಾಳಮದ್ದಳೆಯ ಕೂಟಗಳಲ್ಲಿ ಜೋಶಿಯವರ ಅಬ್ಬರದ ಮಾತುಗಳನ್ನು, ತರ್ಕಬದ್ಧವಾದ ಅರ್ಥವೈಖರಿ ಯನ್ನು ಕಂಡು ಬೆರಗಾಗಿದ್ದೇನೆ. ಸಾಹಿತ್ಯ ಸಮ್ಮೇಳನಗಳಲ್ಲಿ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಯಕ್ಷಗಾನದ ಬಗ್ಗೆ ಅವರ ವಿಮರ್ಶಾತ್ಮಕ ಭಾಷಣಗಳನ್ನು ಕೇಳಿದ್ದೇನೆ. ಈ ಹಿನ್ನೆಲೆಯಿಂದ ಓರ್ವ ಸಾಮಾನ್ಯ ಪ್ರೇಕ್ಷಕನಾಗಿ ನನಗನಿಸಿದ್ದು ಒಂದು ಶತಮಾನದ ಯಕ್ಷಲೋಕದ ಅವಲೋಕನವನ್ನು ಮಾಡಿದರೆ ಅದೆಷ್ಟೋ ಜನ ಹಿರಿಯರು ಈ ಕ್ಷೇತ್ರವನ್ನು ಬೆಳೆಸಿಕೊಂಡು ಉಳಿಸಿಕೊಂಡು ಬಂದಿದ್ದಾರೆ. ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಬಂದವರಿದ್ದಾರೆ. ಆದರೆ ಪುರಾಣ, ಜಾನಪದ, ಇತಿಹಾಸ ಮತ್ತು ಸಾಮಾಜಿಕ ಆಯಾಮದೊಳಗಡೆ ಸೃಜನಶೀಲ ಕಲೆಯಾಗಿ ಚಿಂತನೆ ಮತ್ತು ಮನರಂಜನೆಯನ್ನು ನೀಡುವ ಯಕ್ಷಗಾನ ಮತ್ತು ತಾಳಮದ್ದಳೆಗಳ ಹಿಮ್ಮೇಳ, ಮುಮ್ಮೇಳ, ಕುಣಿತ, ವೇಷಭೂಷಣ ಮುಂತಾದವುಗಳ ಬಗ್ಗೆ

ಅರ್ಥಗಾರಿಕೆಯ ವಿವಿಧ ಆಯಾಮಗಳ ಬಗ್ಗೆ, ಇತಿಮಿತಿಗಳ ಬಗ್ಗೆ ವಿಮರ್ಶೆ ಯನ್ನು ಮಾಡಿದವರು, ಹೊಸ ಎಚ್ಚರವನ್ನು ಹುಟ್ಟಿಸಿದವರು, ಬದಲಾವಣೆಯನ್ನು ಹೊಸ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟವರು ಡಾ. ಎಂ. ಪ್ರಭಾಕರ ಜೋಶಿಯವರು.
ಜೋಶಿಯವರ ಮಾತು, ಕೃತಿ ಮತ್ತು ಆಕೃತಿ ಅವರ ಮುಂದೆ ನಿಂತವರಿಗೆ ಒಂದು ರೀತಿಯ ವಿಸ್ಮಯ. ವೇದಿಕೆಗಳಲ್ಲಿ ತಾಳಮದ್ದಳೆಯ ಕೂಟಗಳಲ್ಲಿ ಕೂತಲ್ಲಿಂದಲೇ ಪ್ರೇಕ್ಷಕರನ್ನು ಸೆಳೆಯಬಲ್ಲ ಆಂಗಿಕ ಅಭಿನಯ ಅವರಲ್ಲಿದೆ. ವಿಮರ್ಶೆ, ಚಿಂತನೆ, ಗಂಭೀರತೆಗಳೊಂದಿಗೆ ಹಾಸ್ಯಭರಿತ ಮಾತುಗಳ ಮೂಲಕ ಯಕ್ಷಕೂಟಕ್ಕೆ ಜೀವಂತಿಕೆಯನ್ನು ತುಂಬಿದವರು ಜೋಶಿಯವರು. ಅವರ ಅಬ್ಬರದ ವ್ಯಕ್ತಿತ್ವವನ್ನು ಮೆಚ್ಚಿಕೊಂಡ ನಾನು ಒಂದು ಸಲ ಕಾಲೇಜಿನಲ್ಲಿ ಅವರ ಪರಿಚಯವನ್ನು ಮಾಡುವ ಸಂದರ್ಭ ಸ್ವಾರಸ್ಯಕ್ಕಾಗಿ ಹೇಳಿದ್ದು ನೆನಪು. ಜೋಶಿಯವರು ನಿಷ್ಠುರವಾಗಿ, ಇದ್ದದ್ದನ್ನು ಇದ್ದಂತೆ ಹೇಳುವವರು. ಕಲೆ, ಸಂಸ್ಕೃತಿಯ ಬಗ್ಗೆ ಪೆದ್ದುತನ ತೋರಿಸು ವವರಿಗೆ ಜನ ಸ್ವಲ್ಪ 'ಪೆದಂಬು. ಆದರೆ ಅದರಲ್ಲಿ ಒಂದು 'ದಂಬು ಇದೆ ಎಂದು.
ಡಾ. ಎಂ. ಪ್ರಭಾಕರ ಜೋಶಿಯವರ ಬಗೆಗಿನ ನಾಲ್ಕು ಕೃತಿಗಳನ್ನು ಓದಿದ ಮೇಲೆ ನನಗನಿಸಿದ್ದು ನಾನು ಆವತ್ತು ಹೇಳಿದ ಮಾತು ನಿಜವಾಗಿ ಸತ್ಯ. ಜೋಶಿಯವರ ವಿಶೇಷತೆಯೇ ಅವರಲ್ಲಿನ 'ದಂಬು', ಇದೇ ಅವರನ್ನು ಅಷ್ಟು ಎತ್ತರಕ್ಕೆ ತಂದು ನಿಲ್ಲಿಸಿದೆ. ಯಾವುದನ್ನು ನಾವು ಕಸುವು,