ಯಕ್ಷ ಪ್ರಭಾಕರ
ಯಕ್ಷಗಾನ ಲೋಕದಲ್ಲಿ ನಾನು ಕಂಡಂತಹ ಅಪ್ರತಿಮ ವಿದ್ವಾಂಸರು, ವಾಗ್ಮಿ ಹಾಗೂ ವಿಮರ್ಶಕರು. ಯಾವುದೇ ವಿಚಾರವನ್ನು ಯಾರದ್ದೇ ವಿಚಾರವನ್ನು ನಿಷ್ಠುರವಾಗಿ ನಿರ್ಭೀತಿಯಿಂದ ಹೇಳುವಂತಹ ನೇರ ಸ್ವಭಾವದ ವ್ಯಕ್ತಿತ್ವ.
ತನಗಿಂತ ಸಣ್ಣ ಕಲಾವಿದರನ್ನು ಮೇಲೆತ್ತಿ ಪೋಷಿಸುವ ಸದ್ಗುಣ ಜೋಶಿಯವರದ್ದು. ಅವರ ಬಗ್ಗೆ ಹೇಳಲು ಹೋದರೆ ನನ್ನ ಆಯುಷ್ಯ ಸಾಲದೇನೋ..
ಜೋಶಿಯವರ ಬಗ್ಗೆ ಮತ್ತೊಂದು ಮಗ್ಗುಲಲ್ಲಿ ಯೋಚಿಸಿದರೆ ಯಾವುದೇ ಒಬ್ಬ ವ್ಯಕ್ತಿ ಒಳ್ಳೆಯ ಕೆಲಸ ಮಾಡುತ್ತಾನೆಂದರೆ ಅಲ್ಲಿ ಅವರಾಗಿಯೇ ಹೋಗಿ ಕೊಡುವ ಪ್ರೋತ್ಸಾಹ ಹೇಳತೀರದು. ನನ್ನ ತಂದೆ ಪಟ್ಲಗುತ್ತು ಮಹಾಬಲ ಶೆಟ್ಟರು ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಒಂದು ತಿಂಗಳ ಪರ್ಯಂತ ಯಕ್ಷಗಾನ ತಾಳಮದ್ದಳೆಯನ್ನು ಸತತ ಇಪ್ಪತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದರು. ಜೋಶಿಯವರು ಅತೀ ಎತ್ತರದ ಕಲಾವಿದ. ಆದರೂ ತಿಂಗಳಿಗೆ ಮೂರು ನಾಲ್ಕು ಬಾರಿ ಅವರಾಗಿಯೇ ಕಾರ್ಯಕ್ರಮಕ್ಕೆ ಬಂದು ಭಾಗವಹಿಸಿ ಅರ್ಥಗಾರಿಕೆ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ಅವರ ಗುಣ ಯಾರೂ ಮೆಚ್ಚುವಂತಹದ್ದು.
ವೈಯಕ್ತಿಕವಾಗಿಯೂ ನನ್ನ ಜೀವನದಲ್ಲಿ ನನಗೆ ಎಲ್ಲಾ ರೀತಿಯಲ್ಲೂ ಬುದ್ಧಿವಾದ, ಜಾಗ್ರತೆಯನ್ನು ಪದೇ ಪದೇ ಹೇಳಿ ನನ್ನನ್ನು ತಿದ್ದುವಂತಹ ನನ್ನ ಗುರು ಸಮಾನರು. ಅವರ ಯಕ್ಷಸಾಧನೆಯ ಕಿರು ಪರಿಚಯವನ್ನು ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ಅನಾವರಣಗೊಳಿಸುತ್ತಿರುವುದುದ ತುಂಬಾ ಸಂತಸವಾಗಿದೆ. ಇದಕ್ಕೆ ಕಾರಣೀಕರ್ತರಾದ ಕದ್ರಿ ನವನೀತ ಶೆಟ್ಟರಿಗೆ ಧನ್ಯವಾದಗಳನ್ನು ಅರ್ಪಿಸಿ, ಡಾ. ಎಂ. ಪ್ರಭಾಕರ ಜೋಇಯವರ ಜೀವನಾದರ್ಶ ಎಲ್ಲರಿಗೂ ಮಾದರಿಯಾಗಲಿ. ಜೋಶಿಯವರ ಯಕ್ಷಸೇವೆ ಮುಂದುವರಿಯಲಿ. ಅವರ ಕೀರ್ತಿ ಅಜರಾಮರವಾಗಿರಲಿ ಎಂದು ಕಟೀಲು ತಾಯಿ ಭ್ರಮರಾಂಬಿಕೆಯಲ್ಲಿ ನನ್ನ ಪ್ರಾರ್ಥನೆ. 2019ರ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ಜೊತೆಗೆ ಈ ಕೃತಿಯನ್ನು ಜೋಶಿಯವರಿಗೆ ಸಮರ್ಪಿಸುತ್ತಿದ್ದೇವೆ.