ಈ ಪುಟವನ್ನು ಪ್ರಕಟಿಸಲಾಗಿದೆ

೧೯

ಅಮಲೆಯನ್ನು ಸಂಗಡ ಕರೆದುಕೊಂಡು ಹಿರಣ್ಮಯಿಯು ಪಲ್ಲಕ್ಕಿ
ಯನ್ನು ಹತ್ತಿ ರಾಜಾವರೋಧವನ್ನು ಪ್ರವೇಶಿಸಿದಳು. ಶ್ರೇಷ್ಠಿಯ ಮಗಳು
ಬಂದಳೆಂದು ಪ್ರತಿಹಾರಿಗಳು ಹಿರಣ್ಮಯಿಯೊಬ್ಬಳನ್ನೇ ರಾಜನ ಸಮುಖಕ್ಕೆ
ಕರೆದುಕೊಂಡು ಹೋದರು. ಅಮಲೆಯು ಹೊರಗೆ ನಿಂತಳು.

ಎಂಟನೆಯ ಪರಿಚ್ಛೇದ.

——————

ಹಿರಣ್ಮಯಿಯು ರಾಜನನ್ನು ನೋಡಿ ವಿಸ್ಮಿತೆಯಾದಳು. ರಾಜನು
ದೀರ್ಘಾಕೃತಿ ಪುರುಷನಾಗಿಯೂ, ಕವಾಟವಕ್ಷನಾಗಿಯೂ, ದೀರ್ಘಹಸ್ತ
ನಾಗಿಯೂ, ಸುಘಟಿತ ಆಕೃತಿಯುಳ್ಳವನಾಗಿಯೂ, ಪ್ರಶಸ್ತ ಲಲಾಟನಾ
ಗಿಯೂ, ವಿಸ್ಫಾರಿತ ಆಯತ ಚಕ್ಷುಗಳುಳ್ಳವನಾಗಿಯೂ, ಶಾಂತಮೂರ್ತಿ
ಯಾಗಿಯೂ ಇದ್ದನು. ಅಂತಹ ಸುಂದರಪುರುಷನು ಹೆಂಗಸರ ದೃಷ್ಟಿಗೆ
ಬೀಳುವುದು ಅಪೂರ್ವ. ರಾಜನು ಶ್ರೇಷ್ಠಿಯ ಕನ್ಯೆಯನ್ನು ನೋಡಿ ಅಂತಹ
ಸುಂದರಿಯು ತನ್ನ ಅಂತಃಪುರದಲ್ಲಿಯೂ ಇರುವುದು ದುರ್ಲಭವೆಂದು
ತಿಳಿದನು.
ರಾಜ - ಹಿರಣ್ಮಯಿಯೆಂಬಾಕೆ ನೀನೇವೆ ?
ಹಿರಣ್ಮಯಿ - ನಾನು ತಮ್ಮ ದಾಸಿ.
ರಾಜ - ನಿನ್ನನ್ನೇಕೆ ಕರೆಯಿಸಿದನೋ ಅದನ್ನು ಕೇಳು. ನಿನ್ನ ವಿವಾ
ಹವಾದ ಸಂಗತಿಯು ನಿನಗೆ ಜ್ಞಾಪಕವುಂಟೆ ?
ಹಿರಣ್ಮಯಿ - ಜ್ಞಾಪಕವುಂಟು.
ರಾಜ - ಅಂದು ರಾತ್ರಿ ಆನಂದಸ್ವಾಮಿಯು ನಿನಗೆ ಕೊಟ್ಟುಂಗುರವು
ನಿನ್ನಲ್ಲಿದೆಯೆ ?
ಹಿರಣ್ಮಯಿ - ಮಹಾರಾಜನೆ ! ಆ ಉಂಗುರವಿದೆ, ಅವೆಲ್ಲಾ ಬಹಳ
ಗುಟ್ಟಾದ ಮಾತು, ತಮಗದಾವ ಪ್ರಕಾರವಾಗಿ ತಿಳಿಯಬಂತು ?
ರಾಜನದಕ್ಕೆ ಉತ್ತರವನ್ನು ಕೊಡದೆ, " ಆ ಉಂಗುರವೆಲ್ಲಿದೆ ?
ನನಗೆ ತೋರು " ಎಂದನು.