ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೧೧

ತಿಮ್ಮಪ್ಪರಾಯನ ಬುದ್ಧಿವಾದ

ಮಾರನೆಯ ದಿನ ತನ್ನ ಮೀಟಿಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ ತಿಮ್ಮರಾಯಪ್ಪ ಮುಂಚಿತವಾಗಿಯೇ ಮನೆಗೆ ಬಂದಿದ್ದನು. ಸ್ನೇಹಿತರ ಪರಸ್ಪರ ಭೇಟಿ ಆಯಿತು.

'ನನ್ನ ಕಾಗದ ಬಂದು ಸೇರಿತೋ ?'

'ಸೇರಿತು ಮಹಾರಾಯ ! ಅದಕ್ಕಾಗಿಯೇ ಈ ದಿನ ಮುಂಚಿತವಾಗಿ ಕಚೇರಿಯಿಂದ ಬಂದೆ. ನೀನು ಬರುತ್ತೀಯೆಂದು ತಿಳಿದು ಮುಂಚಿತವಾಗಿ ಊಟಮಾಡಿ ನಿರೀಕ್ಷಿಸುತ್ತಾ ಕುಳಿತೆ.'

'ನನಗೇನನ್ನೂ ಮಿಗಿಸಲಿಲ್ಲವೆ ? ಎಲ್ಲವನ್ನೂ ನೀನೇ ಕಬಳಿಸಿಬಿಟ್ಟೆಯಾ ?'

'ಅಯ್ಯೋ ಶಿವನೆ ! ಎಲ್ಲವನ್ನೂ ನಾನು ಕಬಳಿಸುತ್ತೇನೆಯೆ ? ನಿನಗೂ ಮಡಗಿದ್ದೇನೆ. ಇನ್ಸ್ಪೆಕ್ಟರ್ ಗಿರಿ ರುಚಿ ಕಂಡವರು ತಿಂಡಿ ಪೋತರಾಗುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲವೆ ?' ಎಂದು ತಿಮ್ಮರಾಯಪ್ಪ ನಗುತ್ತಾ ಹೇಳಿ ಒಳಕ್ಕೆ ಎದ್ದು ಹೋದನು. ತಟ್ಟೆಯಲ್ಲಿ ಒಳ್ಳೆಯ ಬಾಳೆಯ ಹಣ್ಣುಗಳು, ಬಿಸ್ಕತ್ತುಗಳು ಲೋಟಾದಲ್ಲಿ ಹಾಲು ತಂದು ಮುಂದಿಟ್ಟು, 'ಊಟ ಮಾಡು ರಂಗಣ್ಣ ! ಈಗ ನೀನು ಎರಡು ಸುತ್ತು ದುಂಡಗಾಗಿದ್ದೀಯೆ. ಸರ್ಕೀಟು ಗೀರ್ಕೀಟು ಚೆನ್ನಾಗಿ ನಡೀತಿರಬೇಕು !' ಎಂದನು.

ಫಲಾಹಾರ ಸ್ವೀಕಾರ ಮಾಡುತ್ತ ರಂಗಣ್ಣ ತನ್ನ ಅನುಭವಗಳನ್ನೆಲ್ಲ ಹೇಳಿದನು. ತಿಮ್ಮರಾಯಪ್ಪನಿಗೆ ಬೋರ್ಡು ಒರೆಸುವ ಬಟ್ಟೆ ಮತ್ತು ಮೇಷ್ಟು ಮುನಿಸಾಮಿ― ಅವರ ಕಥೆಗಳನ್ನು ಕೇಳಿ ಬಹಳವಾಗಿ ನಗು ಬಂತು.