ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೧೩

ಪ್ಲೇಗುಮಾರಿಯ ಹೊಡೆತ

ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ ; ಒಂದೆರಡು ಸಾವುಗಳಾದುವು ; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ; ಹುಡುಗರು ಪಾಠಶಾಲೆಗೆ ಬರುತ್ತಿಲ್ಲ ಎಂಬುದಾಗಿ ದಿನಕ್ಕೆ ಎರಡು ಮೂರು ಹಳ್ಳಿಗಳಿಂದ ಕಾಗದಗಳು ಬರತೊಡಗಿದವು. ಕೆಲವು ಉಪಾಧ್ಯಾಯರು ಹೆದರಿಕೊಂಡು ರಜಾಗಳಿಗೆ ಬರೆದು ಹಾಕಿದರು. ರಂಗಣ್ಣನಿಗೆ ಬಹಳ ವ್ಯಸನವಾಯಿತು. ತಾನು ಉಪಾಧ್ಯಾಯರ ಸಹಕಾರದಿಂದ ಅಷ್ಟು ಮುತವರ್ಜಿ ವಹಿಸಿ ಮಾಡಿದ್ದ ಏರ್ಪಾಡುಗಳೆಲ್ಲ ಒಂದೇ ಒಂದು ಕ್ಷಣದಲ್ಲಿ ಪ್ಲೇಗಿನ ಅವಾಂತರದಿಂದ ಧ್ವಂಸವಾದುವಲ್ಲ; ಮನುಷ್ಯ ಪ್ರಯತ್ನದಲ್ಲಿ ಈಗೇನಿದೆ ? ಎಂದು ನೊಂದುಕೊಂಡು ಸ್ಥಳದ ಡಾಕ್ಟರಿಗೆ ಕಾಗದ ಬರೆದನು. ವಸ್ತುಸ್ಥಿತಿ ಏನು? ಯಾವ ಯಾವ ಹಳ್ಳಿಗಳಿಗೆ ಈ ಪಿಡುಗು ವ್ಯಾಪಿಸಿದೆ ?ದಯವಿಟ್ಟು ಬೇಗ ಇನಾಕ್ಯುಲೇಷನ್ ಮಾಡಿ ಜನಗಳಿಗೆ ಧೈರ್ಯ ಹೇಳುವುದು– ಎಂದು ಮುಂತಾಗಿ ಬರೆದನು. ಅವರಿಂದ ಉತ್ತರವೂ ಬಂತು. ಇಡಿಯ ಹೋಬಳಿಯಲ್ಲೇ ಪ್ಲೇಗಿನ ಸೋಂಕು ಇದೆ; ಇನಾಕ್ಯುಲೇಷನನ್ನು ಬಹುಮಂದಿಗೆ ಮಾಡಿದ್ದಾಗಿದೆ ; ಆದರೆ ಹಳ್ಳಿಯ ಜನ ಇನಾಕ್ಯುಲೇಷನ್ ಬೇಡ, ಮಾರಿಪೂಜೆ ಮಾಡಿದರೆ ಪ್ಲೇಗು ಮಾಯವಾಗುತ್ತದೆ ಎಂದು ಹಟ ಮಾಡುತ್ತಿದ್ದಾರೆ ; ಕೆಲವು ಕಡೆಗಳಲ್ಲಿ ಪಾಠಶಾಲೆಗಳನ್ನು ಹದಿನೈದು ದಿನಗಳವರೆಗೆ ಮುಚ್ಚುವುದು ಒಳ್ಳೆಯದು; ಆ ಬಗ್ಗೆ ಉಪಾಧ್ಯಾಯರಿಗೆ ಈಗಾಗಲೆ ತಿಳಿಸಿದೆ–ಎಂದು ಉತ್ತರ ಬಂತು.

ಪ್ಲೇಗು ಜಾಡ್ಯ ತಿಪ್ಪೂರು ಹೋಬಳಿ ಮೊದಲಾದ ಕಡೆಗಳಲ್ಲಿ ಪ್ರತಿವರ್ಷವೂ ತಲೆಹಾಕುವುದೆಂದೂ ಆಗ ಪಾಠಶಾಲೆಗಳಲ್ಲಿ ಒಂದೆರಡು ತಿಂಗಳ