ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೧೫

ಸಾಹೇಬರ ತನಿಖೆ

ಜನಾರ್ದನಪುರಕ್ಕೆ ಎರಡು ಮೈಲಿ ದೂರದಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ಬಂಗಲೆ. ರಂಗಣ್ಣ ಒಳ್ಳೆಯ ಉಡುಪನ್ನು ಧರಿಸಿಕೊಂಡು ಬಂಗಲೆಗೆ ಹತ್ತೂವರೆ ಗಂಟೆಗೆ ಸರಿಯಾಗಿ ಹೋದನು. ಸಾಹೇಬರಿಗೆ ಅಡಿಗೆಯ ಏರ್ಪಾಟು ನಡೆದಿತ್ತು. ಗುಮಾಸ್ತೆ ನಾರಾಯಣರಾವ್ ಸಾಹೇಬರ ಕೊಟಡಿಯಲ್ಲಿ ಕಚೇರಿಯ ಕಾಗದಗಳನ್ನು ಸರಿಯಾಗಿ ಜೋಡಿಸಿಟ್ಟು ಹೊರಕ್ಕೆ ಬಂದನು. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಮೋಟಾರು ಬಂಗಲೆಗೆ ಬಂತು ; ಸಾಹೇಬರು ಇಳಿದರು. ನಮಸ್ಕಾರಾದಿ ಪ್ರಕರಣಗಳು ಮುಗಿದುವು. ಸಾಹೇಬರು ಮೆಟ್ಟುಲುಗಳನ್ನು ಹತ್ತುತ್ತಿದ್ದ ಹಾಗೆಯೇ, ' ಏನು ? ನಿಮ್ಮ ರೇಂಜಿನಲ್ಲಿ ಮೇಷ್ಟ್ರುಗಳು ಸರ್ಕ್ಯುಲರುಗಳ ಪ್ರಕಾರ ನಡೆಯುತ್ತಾ ಇಲ್ಲ. ನೀವು ಸರಿಯಾಗಿ ರೂಲ್ಸುಗಳನ್ನು ಜಾರಿಗೆ ತರಬೇಕು' - ಎಂದು ಸ್ವಲ್ಪ ಕಠಿಣವಾಗಿ ಆಡಿದರು.

'ಒಳ್ಳೆಯದು ಸಾರ್ ! ನಾನು ರೂಲ್ಸುಗಳನ್ನು ಬಿಗಿಯಾಗಿಯೇ ಆಚರಣೆಗೆ ತರುತ್ತಿದ್ದೇನೆ. ಎಲ್ಲಿಯಾದರೂ ಒಂದೆರಡು ಕಡೆ ಉಲ್ಲಂಘನೆ ಆಗಿರಬಹುದು, ವಿಚಾರಿಸಿ ಸರಿಮಾಡುತ್ತೇನೆ.'

'ನೋಡಿ ! ದಾರಿಯಲ್ಲಿ - ಆ ಹಳ್ಳಿ, ಅದರ ಹೆಸರೇನು ?'

ಎಂದು ತಮ್ಮ ಜೇಬಿನೊಳಗಿಂದ ಕೈ ಪುಸ್ತಕವನ್ನು ತೆಗೆದು, 'ಸರಿ, ತಿಪ್ಪೇನಹಳ್ಳಿ! ರಿಜಿಸ್ಟರಿನಲ್ಲಿ ದಾಖಲೆಯಿಲ್ಲದ ಮಕ್ಕಳನ್ನು ಆ ಮೇಷ್ಟ್ರು ಒಳಗೆ ಕೂಡಿಸಿಕೊಂಡಿದ್ದ. ಸಣ್ಣ ಮಕ್ಕಳು–ಐದು ವರ್ಷದ ಮೂರು ಮೂರು ವರ್ಷದ ಮಕ್ಕಳು ! ಅವನಿಗೆ ಬರೆ ಎಳೆದಿದ್ದೇನೆ ! ಇಲ್ಲಿಂದ ನಾಲ್ಕು ಮೈಲಿ ದೂರದಲ್ಲಿ ಸುಂಡೇನಹಳ್ಳಿ! ಮೇಷ್ಟ್ರು ಆ ಹಳ್ಳಿಯಲ್ಲಿ ವಾಸಮಾಡುತ್ತಾ ಇಲ್ಲ. ಜನಾರ್ದನಪುರದಿಂದ ಬಂದು ಹೋಗುತ್ತಿದ್ದಾನಂತೆ!ಅವನು ಸ್ಕೂಲ್ಬಾಗಿಲು ಮುಚ್ಚಿಕೊಂಡು ಬೈಸ್ಕಲ್ ಹತ್ತುವಹೊತ್ತಿಗೆ ನನ್ನ ಮೋಟಾರು ಅಲ್ಲಿಗೆ ಹೋಯಿತು. ಕಳ್ಳ ಸಿಕ್ಕಿಬಿದ್ದ.

10