ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೩

ಜಂಬದ ಕೋಳಿ

ಜನಾರ್ದನಪುರದ ಹಳೆಯ ಇನ್ಸ್ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್ ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟುಕೊಂಡು, ಒಂದು ಚೆಕ್ಕುಕೋಟನ್ನೂ, ಸರಿಗೆಯಿಲ್ಲದ ರುಮಾಲನ್ನೂ ಹಾಕಿಕೊಂಡಿದ್ದಾರೆ. ಅವರ ಪಕ್ಕದಲ್ಲಿ ಹೊಸದಾಗಿ ಪ್ರೊಬೇಷನರಿ ಅಸಿಸ್ಟೆಂಟ್ ಕಮಿಷನರ್ ಹುದ್ದೆಗೆ ಬಂದ ದಿವಾನರ ಆಳಿಯನೋ, ಕೌನ್ಸಿಲರ ಮಗನೋ ಎನ್ನುವಂತೆ ರಂಗಣ್ಣ ದಿವ್ಯವಾದ ಸರ್ಜ್ ಸೂಟನ್ನು ಧರಿಸಿ ಒ೦ದೂವರೆ ಅ೦ಗುಲದ ಭಾರಿ ಶೆಟ್ಟರ ಸರಿಗೆ ರುಮಾಲನ್ನು ಇಟ್ಟುಕೊಂಡಿದ್ದಾನೆ. ಕೈಯಲ್ಲಿ ದಂತದ ಕೈಪಿಡಿಯ ಒಳ್ಳೆಯ ಹೊಳಪಿನ ಕರಿಯ ಬೆತ್ತ. ಅವನ ಇಬ್ಬರು ಸಣ್ಣ ಹುಡುಗರು ಒಳ್ಳೆಯ ಬಟ್ಟೆಗಳನ್ನು ಧರಿಸಿಕೊಂಡು ಪಕ್ಕದಲ್ಲಿ ಗಂಭೀರವಾಗಿ ನಿಂತಿದ್ದಾರೆ. ಹಳಬರಿಗೂ ಹೊಸಬರಿಗೂ ಸಂಭಾಷಣೆ ನಡೆಯುತ್ತಿದೆ. ಮೇಷ್ಟರುಗಳು ಅಲ್ಲಲ್ಲೇ ಗುಂಪು ಸೇರಿ ಮಾತುಗಳನ್ನಾಡುತ್ತಿದಾರೆ. ಹೊಸ ಇನ್ಸ್ಪೆಕ್ಟರ ಠೀವಿಯನ್ನು ನೋಡಿ ಬೆರಗಾಗಿದ್ದಾರೆ. ಕೆಲವರು ಕದೀಮರು, ' ಈ ರೀತಿಯಲ್ಲಿ ಎರಡು ದಿನ. ಇಲ್ಲಿ ಬಹಳ ದಿನ ಈ ಇನ್ ಸ್ಪೆಕ್ಟರು ಇರೋದಿಲ್ಲ' ಎಂದು ಕಾಲಜ್ಞಾನ ಹೇಳುತ್ತಿದ್ದಾರೆ. ಹಳ್ಳಿಗಳ ಕಡೆಯಿಂದ ಬಂದ ಕೆಲವರು ಮೇಷ್ಟರುಗಳು ಕೈಯಲ್ಲಿ ನಿಂಬೇಹಣ್ಣುಗಳನ್ನು ಹಿಡಿದು ಕೊಂಡು ಆ ಇನ್ಸ್ಪೆಕ್ಟರುಗಳ ಬಳಿಗೆ ಹೋಗಿ ನಮಸ್ಕಾರ ಮಾಡಿ ಆ ಹಣ್ಣುಗಳನ್ನು ಕೊಡುತ್ತಿದಾರೆ. ಹಳೆಯ ಇನ್‌ಸ್ಪೆಕ್ಟರು ಆ ಮೇಷ್ಟರುಗಳ ಯೋಗಕ್ಷೇಮವನ್ನು ವಿಚಾರಿಸುತ್ತ ಒಳ್ಳೆಯ ಮಾತು ಆಡುತ್ತಿದಾರೆ. ಆದರೆ ರಂಗಣ್ಣನಿಗೆ ಆ ಮಾತಿನ ಸರಣಿ ಮೆಚ್ಚಿಕೆಯಾಗಲಿಲ್ಲ. 'ಒಳ್ಳೆಯದು ಹೋಗು, ನಿನಗೆ ಹೊಸಹಳ್ಳಿಗೇನೆ ವರ್ಗ ಮಾಡಿಕೊಡುವಂತೆ ಇವರಿಗೆ ಹೇಳುತ್ತೇನೆ. 'ನಿನ್ನದೇನು ಅರಿಕೆ ?ಪ್ರಮೋಷನ್ ಬೇಕೆಂದು.