ಈ ಪುಟವನ್ನು ಪ್ರಕಟಿಸಲಾಗಿದೆ

೨೯೮

ರಂಗಣ್ಣನ ಕನಸಿನ ದಿನಗಳು

ಸೇರಿಸುತ್ತಿದ್ದಿರಲ್ಲ, ತಿಪ್ಪೂರಿನಲ್ಲಿ ಸೇರಿಸಿ ವಾರ್ಷಿಕೋತ್ಸವ ಮಾಡಿ ದೊಡ್ಡ ಸಾಹೇಬರನ್ನು ಅಧ್ಯಕ್ಷರನ್ನಾಗಿ ಬರಮಾಡಿಕೊಳ್ಳಬೇಕಾಗಿತ್ತು, ಕಲ್ಲೇಗೌಡರನ್ನೂ ಕರೆಸಿಕೊಂಡು, ಊರಿನ ವೈಸ್ ಪ್ರೆಸಿಡೆಂಟ್ ಮೊದಲಾದವರನ್ನೂ ಕರೆಸಿಕೊಂಡು ಸ್ಕೂಲು ಮುಂದಿನ ಚಪ್ಪರದಲ್ಲಿ ಕೂಡಿಸಬೇಕಾಗಿತ್ತು. ದೊಡ್ಡ ಸಾಹೇಬರೇ ನೇರಾಗಿ ಕಲ್ಲೇಗೌಡನೊಡನೆ ಮಾತನಾಡುತ್ತಿದ್ದರು. ವೈಸ್ ಪ್ರೆಸಿಡೆಂಟ್ ಮೊದಲಾದವರು ದೊಡ್ಡ ಸಾಹೇಬರಿಗೆ ತಾವೇ ಹೇಳುತ್ತಿದ್ದರು. ಆಗ ನೀವು ನಿಷ್ಟುರಕ್ಕೆ ಗುರಿಯಾಗುತ್ತಿರಲಿಲ್ಲ! ಕಲ್ಲೇಗೌಡನು ಕೂಡ ಆ ಸಂದರ್ಭದಲ್ಲಿ ಮಾನ ಉಳಿಸಿಕೊಳ್ಳುವುದಕ್ಕಾಗಿ ಕಟ್ಟಡದ ರಿಪೇರಿ ಮಾಡಿಸುತ್ತಿದ್ದನೋ ಏನೋ! ಅದೂ ಬೇಡ. ಮೇಲಕ್ಕೆ ಬರೆದು ಸರ್ಕಾರದ ಕಟ್ಟಡವನ್ನು ಯಾವಾಗಲೋ ಕಟ್ಟಿಸಬಹುದಾಗಿತ್ತಲ್ಲ! ಮುಖ್ಯವಾಗಿ ನೋಡಿ ! ನಿಮಗೆ ಜ೦ಬ ಹೆಚ್ಚು ! ಎಲ್ಲರೂ ನಿಮ್ಮನ್ನು ಆಶ್ರಯಿಸಬೇಕು, ಹೊಗಳಬೇಕು ಎಂಬ ಚಾಪಲ್ಯ ಇಟ್ಟು ಕೊಂಡಿದ್ದೀರಿ ! ನಿಮ್ಮ ಉಡುಪು ನೋಡಿದರೇನೇ ಸಾಕು, ಮಹಾ ಜಂಬಗಾರರು ಎಂದು ಎಲ್ಲರ ಕಣ್ಣೂ ಬೀಳುತ್ತದೆ !'

ರಂಗಣ್ಣನಿಗೆ ನಗು ಬಂತು, ತನ್ನ ಉಡುಪಿನ ಮೇಲೆ ಊರ ಜನರ ಕಣ್ಣು ಬೀಳುವುದಿರಲಿ ; ತನ್ನ ಹೆಂಡತಿಯ ಕಣ್ಣ ಬಿದ್ದಿದೆ ಎಂದು ಅವನಿಗೆ ತಿಳಿಯಿತು.

'ನೀನು ಜಂಬವನ್ನು ಮಾಡುವುದಿಲ್ಲವೋ? ಅಮಲ್ದಾರರ ಹೆಂಡತಿ, ಪೊಲೀಸ್ ಇನ್ಸ್ಪೆಕ್ಟರ ಹೆಂಡತಿ ಮೊದಲಾದವರಿಗಿಂತ ಠೀಕಾಗಿರಬೇಕು ಎಂದು ನೀನು ಹೊಸ ಹೊಸ ಸೀರೆಗಳನ್ನು ಕೊಂಡುಕೊಳ್ಳುತ್ತಾ ಇಲ್ಲವೋ? ನನ್ನ ಸರ್ಕೀಟಿನ ದಿಂಬುಗಳಿಗೆಲ್ಲ ಕಸೂತಿ ಹಾಕಿದ ಗವಸುಗಳನ್ನು ಮಾಡೆಂದು ನಾನು ಹೇಳಿದೆನೆ ? ಅವುಗಳಲ್ಲಿ ನೀಲಿ ದಾರದಿಂದ ನನ್ನ ಹೆಸರನ್ನು ರಚಿಸೆಂದು ಕೇಳಿದೆನೇ ? ನಿನಗೂ ನಿನ್ನ ಗಂಡ ಜಂಬವಾಡಬೇಕೆಂದು ಬಯಕೆ ಇದೆ ! ಹೋಗಲಿ ಬಿಡು, ಆ ಉಗ್ರಪ್ಪನ ವಿಚಾರದಲ್ಲಿನೀನು ಏನು ಮಾಡುತ್ತಿದ್ದೆ ? ಹೇಳು ನೋಡೋಣ.'

'ನಾನು ಮಾಡುತ್ತಿದ್ದುದೇನು ? ಅವನ ಮುಖಂಡರು ನಿಮ್ಮ ಸ್ನೇಹಿತರೆಂದು ಅವನಿಗೆ ತಿಳಿದಿದ್ದರೆ ಅವನೇಕೆ ತುಂಟಾಟ ಮಾಡುತ್ತಿದ್ದ!