ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೨೮

ಶಾಂತವೀರಸ್ವಾಮಿಗಳ ಆತಿಥ್ಯ

ರಂಗಣ್ಣನಿಗೆ ವರ್ಗವಾಗಿರುವ ಸಂಗತಿ ರೇಂಜಿನಲ್ಲಿ ಪ್ರಚಾರವಾಯಿತು. ಆವಲಹಳ್ಳಿಯ ದೊಡ್ಡಬೋರೇಗೌಡರೂ ರಂಗನಾಥಪುರದ ಗಂಗೇಗೌಡರೂ ಬಂದು ಮಾತನಾಡಿಸಿದರು. ' ವರ್ಗದ ಆರ್ಡರನ್ನು ರದ್ದು ಪಡಿಸಲು ಪ್ರಯತ್ನ ಪಡೋಣವೇ'–ಎಂದು ಕೇಳಿದರು.

'ಬೇಡ. ನೀವುಗಳು ಪ್ರಯತ್ನಪಟ್ಟರೆ ನಿಮ್ಮನ್ನೆಲ್ಲ ನಾನು ಎತ್ತಿಕಟ್ಟಿದೆನೆಂದು ಮೇಲಿನ ಸಾಹೇಬರು ತಿಳಿದುಕೊಂಡು ಅಸಮಾಧಾನ ಪಟ್ಟುಕೊಳ್ಳುತ್ತಾರೆ. ಅದೂ ಅಲ್ಲದೆ ಈ ವರ್ಗದ ಆರ್ಡರನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ಆದ್ದರಿಂದ ಬದಲಾಯಿಸುವುದಿಲ್ಲ' ಎಂದು ರಂಗಣ್ಣ ಹೇಳಿದನು. ಕಡೆಗೆ ಆ ಇಬ್ಬರು ಗೌಡರು ತಮ್ಮ ಹಳ್ಳಿಗಳಿಗೆ ಒಂದು ದಿನವಾದರೂ ಬಂದು ಆತಿಥ್ಯ ಸ್ವೀಕಾರ ಮಾಡಬೇಕೆಂದು ಕೇಳಿಕೊಂಡರು. ಅವರ ಇಷ್ಟಾನುಸಾರ ರಂಗಣ್ಣ ಅವರ ಹಳ್ಳಿಗಳಿಗೆ ಹೋಗಿಬಂದನು.

ಹೀಗೆ ವಾಪಸು ಬಂದನಂತರ ಗವಿಮಠದ ಪಾರು ಪತ್ಯಗಾರನು ಕುದುರೆಗಾಡಿಯನ್ನು ತೆಗೆದುಕೊಂಡು ಬಂದು ರಂಗಣ್ಣನನ್ನು ಮನೆಯಲ್ಲಿ ಕಂಡನು.

'ಸ್ವಾಮಿಯವರಿಗೆ ನನ್ನ ಕಾಗದ ಸೇರಿತೋ ?' ಎಂದು ರಂಗಣ್ಣ ಕೇಳಿದನು.

'ಸೇರಿತು ಸ್ವಾಮಿ ! ಗಾಡಿಯನ್ನು ಕಳಿಸಿದ್ದಾರೆ. ಖುದ್ದಾಗಿ ನನ್ನನ್ನೇ ಕಳಿಸಿದ್ದಾರೆ. ತಾವು ದಯಮಾಡಿಸಬೇಕು.'

ರಂಗಣ್ಣ ಒಳಕ್ಕೆ ಹೋಗಿ ಹೆಂಡತಿಗೆ ವರ್ತಮಾನ ಕೊಟ್ಟನು. ಆಕೆ, 'ಹೋಗಿ ಬನ್ನಿ. ಆದರೆ ಶಂಕರಪ್ಪನನ್ನು ಜೊತೆಗೆ ಕರೆದುಕೊಂಡು ಹೋಗಿ' ಎಂದು ಹೇಳಿದಳು.ಶಂಕರಪ್ಪನಿಗೆ ಉಗ್ರಪ್ಪನ ಪೆನ್ಷನ್