ಈ ಪುಟವನ್ನು ಪ್ರಕಟಿಸಲಾಗಿದೆ

ಶಾಂತವೀರಸ್ವಾಮಿಗಳ ಆತಿಥ್ಯ

೩೧೧

ಬೋಂಡ, ವಾಂಗೀಭಾತು, ಕೇಸರಿಭಾತು, ಆಂಬೊಡೆ, ಹಪ್ಪಳ, ಬೂದುಗುಂಬಳಕಾಯಿ ಮಜ್ಜಿಗೆಹುಳಿ, ತೊವ್ವೆೆ, ಕೂಟು, ಪಲ್ಯಗಳು, ಕೋಸುಂಬರಿಗಳು ಇತ್ಯಾದಿ. ದೊಡ್ಡ ದೊಡ್ಡ ಮಣೆಗಳ ಮುಂದೆ ದೊಡ್ಡ ದೊಡ್ಡ ಬಾಳೆಯ ಆಗ್ರನೆಲೆಗಳನ್ನು ಹಾಕಿ ಅಲಂಕಾರ ಪಂಕ್ತಿಗೆ ಬಡಿಸಿದಂತೆ ಬಡಿಸಿದ್ದುದನ್ನು ನೋಡಿ ರಂಗಣ್ಣನು ವಿಸ್ಮಿತನಾದನು. ಊಟ ಮಾಡುತ್ತಿದ್ದಾಗ ರಂಗಣ್ಣನ ಪಕ್ಕದಲ್ಲಿ ಕುಳಿತಿದ್ದ ಅಮಲ್ದಾರರು.

'ಏನು ರಂಗಣ್ಣನವರೇ ! ರಾಜಿ ಆದ ಹಾಗೆ ಕಾಣುತ್ತಿದೆಯಲ್ಲ ! ಏನು ಸಮಾಚಾರ ? ಎಂದು ಕೇಳಿದರು,

ರಂಗಣ್ಣನು ಆ ಬೆಳಗ್ಗೆ ನಡೆದ ಪ್ರಸಂಗವನ್ನು ಚಿಂತನೆ ಮಾಡುತ್ತ ಮಾಡುತ್ತ ಗಂಭೀರಮುದ್ರೆಯನ್ನು ತಾಳಿದ್ದನು. ಹಿಂದೆ ಅವನಲ್ಲಿ ನೆಲೆಸಿದ್ದ ಅಧಿಕಾರ ರಭಸ ಮನೋವೃತ್ತಿ ಮತ್ತು ಜಂಬ ಕಡಮೆಯಾಗಿದ್ದುವು. ಅವುಗಳ ಪರಿಣಾಮವಾಗಿ,

'ನಾವೆಲ್ಲ ಅತಿಥಿಗಳಾಗಿ ಬಂದಿಲ್ಲವೇ ! ಅತಿಥಿಗಳಿಗೆ ಉಪಚಾರ ಹಿಂದೂ ಧರ್ಮದಲ್ಲಿ ಮುಖ್ಯ. ಇದು ಧರ್ಮ ಪೀಠ ! ಆದ್ದರಿಂದ ರಾಜಿಯಾಗುವುದು ಸಹಜವಾಗಿದೆಯಲ್ಲವೇ ? ' ಎಂದು ಗಂಭೀರವಾಗಿ ಉತ್ತರ ಕೊಟ್ಟನು

'ನಿಮ್ಮನ್ನೂ ಅವರನ್ನೂ ಒಟ್ಟಿಗೆ ಕ೦ಡಾಗ ನಮಗೆಲ್ಲ ಆಶ್ಚರ್ಯವಾಯಿತು !

'ಹೀಗೆಯೇ ! ನಮ್ಮ ಜೀವನಲ್ಲಿ ಅನೇಕ ಆಶ್ಚರ್ಯಗಳು ಕಾಣುತ್ತಿರುತ್ತವೆ. ಹೊಸ ಹೊಸ ಅನುಭವಗಳು ಬಂದಹಾಗೆಲ್ಲ ಹೊಸ ಹೊಸ ಸನ್ನಿವೇಶಗಳೊಡನೆ ರಾಜಿಮಾಡಿಕೊಳ್ಳುತ್ತಲೇ ಲೋಕ ಮುಂದುವರಿಯಬೇಕು !

ಅಮಲ್ದಾರರಿಗೆ ಆ ಮಾತುಗಳಿಂದ ಏನೊಂದೂ ಅಭಿಪ್ರಾಯವಾಗಲಿಲ್ಲ, ಇನ್ನು ಹೆಚ್ಚಾಗಿ ಪ್ರಶ್ನಿಸುತ್ತ ಹೋದರೆ ತಮ್ಮ ಮೌಢವಲ್ಲಿ ಹೊರಬೀಳುವುದೋ ಎಂದು ಸುಮ್ಮನಾದರು. ಭೋಜನ ಸಮಾರಂಭ ಮುಗಿಯಿತು, ತಾಂಬೂಲ ಚರ್ವಣಾದಿ ಪ್ರಕರಣಗಳು ಮುಗಿದುವು.ವಿಶ್ರಾಂತಿಗಾಗಿ ತಂತಮ್ಮ ಬೇಡಾರಗಳಿಗೆ ಎಲ್ಲರೂ ಹೊರಟರು.