ಈ ಪುಟವನ್ನು ಪ್ರಕಟಿಸಲಾಗಿದೆ

೩೨೮

ರಂಗಣ್ಣನ ಕನಸಿನ ದಿನಗಳು

ಪುರದಲ್ಲಿ ರಂಗಣ್ಣ ನಡೆಸಿದ ಇನ್‌ಸ್ಪೆಕ್ಟರ್‌ಗಿರಿಯ ಮಾತುಗಳೇ ಆಗಿದ್ದುವು. ಮಧ್ಯೆ ಮಧ್ಯೆ ತಿಮ್ಮರಾಯಪ್ಪ ತಾನು ನಡೆಸಿದ ಇನ್ಸ್ಪೆಕ್ಟರ್ ಗಿರಿಯ ಕೆಲವು ಕಥೆಗಳನ್ನೂ ಹೇಳುತ್ತಿದ್ದನು. ರಂಗಣ್ಣನು ಉಗ್ರಪ್ಪನ ವಿಚಾರವನ್ನೂ, ಅವನ ವಾದವನ್ನೂ, ಅವನಲ್ಲಾದ ಪರಿವರ್ತನೆಯನ್ನೂ, ಶಾಂತವೀರಸ್ವಾಮಿಯಾಗಿ ತನಗೆ ಮಾಡಿದ ಆತಿಥ್ಯವನ್ನೂ , ಕಲ್ಲೇಗೌಡ ಮತ್ತು ಕರಿಯಪ್ಪನವರೊಡನೆ ಆದ ಶಾಂತಿ ಸಂಧಾನವನ್ನೂ-ಎಲ್ಲವನ್ನೂ ಹೇಳಿದಾಗ ತಿಮ್ಮರಾಯಪ್ಪನು,

'ಅಯ್ಯೋ ಶಿವನೇ! ಎಂತಹ ಮಾರ್ಪಾಟು !' ಎಂದು ಉದ್ಗಾರ ತೆಗೆದನು.

'ನೋಡಿದೆಯಾ ತಿಮ್ಮರಾಯಪ್ಪ ! ನನ್ನ ಇನ್ ಸ್ಪೆಕ್ಟ‌ಗಿರಿ ಮಧ್ಯೆ ಮಧ್ಯೆ ಮನಸ್ಸಿಗೆ ಬೇಜಾರಾಗಿ ಹಾಳು ಇನ್ ಸ್ಪೆಕ್ಟರ್ ಗಿರಿ ನನಗೆ ಸಾಕಪ್ಪ! ಎಂದು ನಿನಗೆ ನಾನು ಬರೆಯುತ್ತಿದ್ದೆ. ಆದರೂ ಕೊನೆಯಲ್ಲಿ ನನಗೆ ಜನಾರ್ದನ ಪುರವನ್ನು ಬಿಟ್ಟು ಬರುವುದಕ್ಕೆ ಬಹಳ ವ್ಯಥೆಯಾಯಿತು. ಒಟ್ಟಿನಲ್ಲಿ ನನ್ನ ದರ್ಬಾರು ನಿನಗೆ ಮೆಚ್ಚಿಕೆಯಾಯಿತೆ ?” ರಂಗಣ್ಣ ಕೇಳಿದನು.

'ಶಿವನಾಣೆ ರಂಗಣ್ಣ! ಶಿವನಾಣೆ ! ನಿನಗೆ ಪ್ರಮಾಣ ವಾಗಿ ಹೇಳುತೇನೆ. ನಾವುಗಳೂ ಹಲವರು ಇನ್ಸ್ಪೆಕ್ಟರ್ ಗಿರಿ ಮಾಡಿದೆವು. ಹತ್ತರಲ್ಲಿ ಹನ್ನೊಂದು ! ಲೆಕ್ಕವೇ ಪಕ್ಕವೇ ! ನಿನ್ನ ಇನ್ ಸ್ಪೆಕ್ಟರ್ ಗಿರಿ ಒಂದು ಮಹಾ ಕಾವ್ಯ ! ಆ ಚಂದ್ರಾರ್ಕವಾಗಿ ನಿಂತು ಹೋಯಿತು ! ನನಗೆ ಬಹಳ ಸಂತೋಷ ರಂಗಣ್ಣ !' ಎಂದು ಹೇಳುತ್ತಾ ತಿಮ್ಮರಾಯಪ್ಪ ರಂಗಣ್ಣನನ್ನು ಆಲಿಂಗನ ಮಾಡಿಕೊಂಡನು.

'ದೇವರೇ ! ನಾನು ನೂರತೊಂಬತ್ತು ಪೌ೦ಡು ತೂಕ ಇಲ್ಲ ! ನಾನು ಅಪ್ಪಚ್ಚಿಯಾಗಿ ಹೋಗ್ತನೆ ! ಬಿಡು, ತಿಮ್ಮರಾಯಪ್ಪ ! ಅವರಿಬ್ಬರೂ ನೋಡಿ ನಗುತ್ತಿದಾರೆ ! ನನ್ನ ಇನ್ ಸ್ಪೆಕ್ಟರ್‌ಗಿರಿ ಇರಲಿ. ನಿನ್ನ ಸ್ನೇಹ ನಿಜವಾಗಿಯೂ ಒಂದು ಮಹಾ ಕಾವ್ಯ ! ಅದು ಆಚಂದ್ರಾರ್ಕವಾಗಿ ನಿಂತಿರುತ್ತದೆ !' ಎಂದು ರಂಗಣ್ಣ ನಗುತ್ತಾ ಹೇಳಿದನು.