ಈ ಪುಟವನ್ನು ಪ್ರಕಟಿಸಲಾಗಿದೆ

ಮೇಷ್ಟ್ರ ಮುನಿಸಾಮಿ

೭೭

ಬಿಡಿಸಿಕೊಂಡು ಸೆಲೂನ್ ಇಟ್ಟು ಕೊಂಡರೆ ಅವನ ಜೀವನ ನಡೆಯುತ್ತದೆ. ಆ ಮೇಷ್ಟು ಸಹ ನಮ್ಮೊಡನೆ ಹಿಂದೆಯೇ ಹೇಳಿದ. ಈಗ ಸ್ಕೂಲಿಗೆ ಬೇರೆ ಕಟ್ಟಡ ಇಲ್ಲ. ಪಂಚಾಯತಿ ಕಟ್ಟಡ ಇನ್ನೂ ಆರು ತಿಂಗಳಿಗೆ ಎದ್ದೀತು, ಆಮೇಲೆ ಏನಾದರೂ ಏರ್ಪಾಟು ಮಾಡಬಹುದು. ಎಷ್ಟು ಒಳ್ಳೆಯವನು, ಕೆಟ್ಟ ಅಭ್ಯಾಸಗಳಿಲ್ಲ ; ಚೆನ್ನಾಗಿ ಪಾಠ ಮಾಡುತ್ತಾನೆ. ಚೊಕ್ಕಟವಾಗಿದ್ದಾನೆ. ನಮ್ಮ ಪುಕಾರು ಏನೂ ಇಲ್ಲ. ನಿಮ್ಮ ಇಲಾಖೆಯ ರೂಲ್ಸ್ ನಮಗೇಕೆ ಸ್ವಾಮಿ ?'

'ಶ್ಯಾನುಭೋಗರೇ, ನೀವು ಹೇಳುವುದನ್ನೆಲ್ಲ ಒಪ್ಪುತ್ತೇನೆ. ಆದರೆ ರೂಲ್ಸ್ ಇರುವ ತನಕ ನಾನೇನೂ ಮಾಡುವ ಹಾಗಿಲ್ಲ. ಸ್ಕೂಲಿಗೆ ಎಲ್ಲಿಯಾದರೂ ಬೇರೆ ಕಟ್ಟಡ ನೀವು ಕೊಡಬೇಕು.'

'ಆಲೋಚನೆ ಮಾಡುತ್ತೇನೆ ಸ್ವಾಮಿ. ಈ ಮೇಷ್ಟರನ್ನು ಮಾತ್ರ ತಪ್ಪಿಸಬೇಡಿ. ಈಗ ಒಂದೂವರೆ ವರ್ಷದಿಂದ ಅವನ ಕಟ್ಟಡದಲ್ಲಿ ಸ್ಕೂಲು ನಡೆಯುತ್ತಾ ಇದೆ. ಹಿಂದಿನ ಇನ್‌ಸ್ಪೆಕ್ಟರವರ ಕಾಲದಲ್ಲಿ ಎರಡು ರೂಪಾಯಿ ಬಾಡಿಗೆಗೆ ಗೊತ್ತು ಮಾಡಿದ್ದಾಯಿತು. ಇದುವರೆಗೂ ಬಾಡಿಗೆ ಮಂಜೂರಾಗಿ ಬರಲಿಲ್ಲ. ಆದರೂ ಮೇಷ್ಟು ತಕರಾರ್ ಮಾಡದೆ ನಡೆಸಿಕೊಂಡು ಹೋಗುತ್ತಿದ್ದಾನೆ. ನಾಳೆ ದಿನ ಅವನು ಸ್ಕೂಲಿನ ಸಾಮಾನುಗಳನ್ನೆಲ್ಲ ತಂದು ನನ್ನ ಮನೆಯಲ್ಲಿ ಹಾಕಿ-ಸ್ಕೂಲು ಚಾರ್ಜು ತೆಗೆದುಕೊಳ್ಳಿ, ನಾನು ಕೆಲಸ ಬಿಟ್ಟಿದ್ದೇನೆ ಎಂದು ಹೇಳಿದರೆ ಅನ್ಯಾಯವಾಗಿ ಸ್ಕೂಲು ಮುಚ್ಚಿ ಹೋಗುತ್ತದೆ. ತಾವೂ ಆಲೋಚನೆಮಾಡಿ ಸ್ವಾಮಿ.'

ಊಟವಾಯಿತು, ಮಾತು ಮುಗಿಯಿತು, ರಂಗಣ್ಣನಿಗೆ ದೊಡ್ಡದೊಂದು ಸಮಸ್ಯೆ ಗಂಟು ಬಿತ್ತು. ತಿಮ್ಮರಾಯಪ್ಪನಿಗೆ ಕಾಗದ ಬರೆದು ಸಲಹೆ ಕೇಳಲೆ ? ಅಥವಾ ಸಾಹೇಬರಿಗೆ ತಿಳಿಸಿ ಅವರಿಂದ ಸಲಹೆ ಕೇಳಲಿ ? ಅಥವಾ ಸ್ಕೂಲು ಮುಚ್ಚಿ ಹೋದರೆ ಹೋಗಲಿ ಎಂದು ರೂಲ್ಸ್ ಪ್ರಕಾರ ಆಚರಿಸಲೆ? ಎಂದು ಆಲೋಚನೆ ಮಾಡುತ್ತಿದ್ದನು. ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡು, ಮಧ್ಯಾಹ್ನ ಪಾಠಶಾಲೆಯ ತನಿಖೆಗೆ ಹೊರಟನು. ಮಕ್ಕಳಲ್ಲಿ ಒಳ್ಳೆಯ ಉಡುಪುಗಳನ್ನು ಹಾಕಿ