ಕಂ||ಶ್ರೀ ಜಿನ ಗೃಹಮಂ ತ್ರಿಭುವನ
ಪೂಜಿತಮಂ ಪದ್ಮರಾಗ ಮಣಿ ತೋರಣ ವಿ||
ಭ್ರಾಜಿತಮಂ ಪೊಕ್ಕಂ ಜನ
ತಾ ಜಂಗಮ ಕಲ್ಪವೃಕ್ಷನಭಿನವಪಂಪಂ||೧||
ಅಂತು ಪೊಕ್ಕು ಪದ ಪಯೋರುಹ ಮರೀಚಿಯಂ ಮಧ್ಯರ೦ಗಮನಳಂಕರಿಸಿ
ಮುಕುಳಿತ ಕರಾಂಬುಜಂ ತ್ರಿಭುವನ ಪ್ರಭುಗಭಿಮುಖನಾಗಿ-
ಉ||ಕೇವಲ ಬೋಧದಿಂದಳಿದು ಪಾತ್ರಮಪಾತ್ರಮಿದೆಂಬ ಭೇದಮಂ|
ದೇವರ ದೇವ ಸಂಚಕರಮಕ್ಷಯ ಮೋಕ್ಷಸುಖಕ್ಕೆನಲ್ ಏನೇ||
ಯಾವಳಿಗಿತ್ತು ದಾತ್ತ ದಿವಿಜೇಂದ್ರ ನರೇಂದ್ರ ಫಣೀಂದ್ರ ರಾಜ್ಯ ಲ|
ಕ್ಷ್ಮೀ ವಿಭವಂಗಳಂ ತಳೆದೆ ನೀ೦ ಜಸಮಂ ಜಗದೊಳ್ ಜಿನೇಶ್ವರಾ||೨||
ಉ||ಇತ್ತಪೆ ನೀನೆ ದೇಹಿಗನುರೂಪಮೆನಲ್ ಸುಖ ಲೇಶಮಾದಿಯಾ|
ಗತ್ತಲನಂತ ಸೌಖ್ಯಮವಸಾನಮೆನಲ್ ಪೆರರಾರುಮೀವರಿ||
ಲ್ಲಿತ್ತ ಪರನ್ಯರೆಂದು ಬಹಿರಂಗ ನಿಮಿತ್ತದಿನೆಂಬರೆನ್ಗೆ ದೇ|
ವೋತ್ತಮ ನೀನೆ ಚಾಗಿವೆಸರಂ ಪಡೆದೈ ಜಗದೊಳ್ ಜಿನೇಶ್ವರಾ||೩||
ಚ||ಪಗೆಕೆಳೆಯೆಂಬ ಭೇದದರಿತಂ ತಮಗಿಲ್ಲದೆ ತಮ್ಮ ನಂಟರಂ|
ಪಗೆವರೆ ಗೆತ್ತು ಕೊಂದು ಕಲಿಯಪ್ಪವರಕ್ಕೆಮ ಘಾತಿ ಕರ್ಮಮಂ||
ಪಗೆವಡೆಯಂ ಪಡಲ್ವಡಿಸಿ ಕೀಳಿ ಕೃತಾಂತನನಿಕ್ಕಿ ವೀರಲ|
ಕ್ಷ್ಮಿಗೆ ನೆಲೆಯಾದ ಮೆಯ್ಗಲಿಯೆ ನೀನೆ ವಲಂ ಜಗದೊಳ್ ಜಿನೇಶ್ವರಾ||೪||
ಚ||ನನೆಗಣೆಯಿಂ ಜಗತ್ರಯಮನಂಡಲೆದಂಗಭವಂಗೆ ಭಂಗಮಂ|
ಜನಿಯಿಸಿದೈ ಚರಾಚರರುಮಂ ತವೆ ನುಂಗಿದ ಕಾಲ ದಂದಶೂ||
ಕನ ರದಮಂ ಕಳಿಲ್ಚಿ ಕಳೆದೈ ಕಡು ಬಲ್ಲಿದನಪ್ಪ ಮೋಹಮ|
ಲ್ಲನ ಬಲಗಯ್ಯನಯ್ಯ ಮುರಿದೈ ಕಲಿ ನೀನೆ ವಲಂ ಜಿನೇಶ್ವರಾ||೫||
ಉ||ನೀರೆಯರುನ್ನತ ಸ್ತನ ಭರಂಗಳ ಭಾರಮವುಂಕಿ ಸೋ೦ಕೆ ನೀ|
ರೇರಿದರೇರಿದರ್ಪೆರವ್ರು ಪೀಠಮನನ್ಯರೊಳಾಪ್ತರೆಂಬ ಮಾ||
ತೇರದು ಭಾರತೀ ಸ್ತನ ಭರಂಗಳ ಭಾರಮವುಂಕಿ ಸೋಂಕೆ ನೀ|
ರೇರಿದೆ ಸಿಂಹ ವಿಷ್ಟರಮನೇ ಳಿದೆ ನೀನೆ ವಲಂ ಜಿನೇಶ್ವರಾ|| ೬ ||