ಬಲಾಚ್ಯುತರು ಆ ದೇವನನ್ನು ಮನ್ನಿಸಿ ಜೈನಪೂಜೆ ಮಾಡಿ ಧ್ಯಾನಿಸಿ ತಮ್ಮ ಮನೋರಥ ಸಿದ್ದಿಯಾದುದಕ್ಕಾಗಿ ಪುಲಕಾಂಕಿತರಾದರು.
ಆಶ್ವಾಸ ೧೪ - ರಘುವೀರ ವಿಜಯ ವರ್ಣನೆ
ರಾಮಲಕ್ಷ್ಮಣರು ಚಿ೦ತಾ ವೇಗ ದೇವನನ್ನು ನಿರ್ಭರ ಭಕ್ತಿಯಿಂದ ಸ್ತುತಿಸಲು ಆತನು ಸಂತೋಷ ಚಿತ್ತನಾಗಿ ಅವರಿಗೆ ಅನೇಕ ದಿವ್ಯ ಬಾಣಗಳನ್ನೂ ಧವಳ , ಛತ್ರ ಚಾಮರಗಳನ್ನೂ ಸಿಂಹ ಗರುಡ ಧ್ವಜಗಳನ್ನೂ ಅಭೇದ್ಯ ಕವಚಗಳನ್ನೂ ಅನರ್ಘ ರತ್ನಭೂಷಣಗಳನ್ನೂ ಕೊಟ್ಟು ತನ್ನ ಸ್ಥಾನಕ್ಕೆ ತೆರಳಿದನು. ಅನಂತರ ಗರುಡವಾಹಿನಿಯ ಪ್ರಭಾವದಿಂದ ನಾಗಸಾಶವಿದ್ಯೆಯು ಸಡಿಲಿಹೋಗಲು ಹನುಮ ಸುಗ್ರೀವ ಪ್ರಭಾಮಂಡಲರು ಮೂರ್ಛಯಿಂದೆಚ್ಚತ್ತು ಸಿಂಹ ಗರುಡ ವಾಹನಾ ರೂಢರಾಗಿದ್ದ ರಾಮಲಕ್ಷ್ಮಣರಲ್ಲಿಗೆ ಬಂದು ಅವರ ಪುಣ್ಯ ಪ್ರಭಾವಕ್ಕೆ ಸಂತೋಷಪಟ್ಟು ಆ ವೃತ್ತಾಂತವನ್ನವರಿಂದ ತಿಳಿದು ಎಲ್ಲರೂ ಬೀಡಿಗೆ ಹೋಗಿ ಆ ರಾತ್ರಿ ಸುಖದಿಂದಿದ್ದರು. ಬೆಳಗಾಗುತ್ತಲೆ ಎಂದಿನಂತೆ ರಾವಣನು ರಣಭೂಮಿಗೆ ಬಂದು ಒಡ್ಡಿ ನಿಲ್ಲಲು ರಾಮಲಕ್ಷ್ಮಣರು ನಿತ್ಯ ನಿಯಮಗಳನ್ನು ತೀರಿಸಿ ದೇವನಿತ್ಯ ಕವಚ ಗಳನ್ನು ತೊಟ್ಟು ದಿವ್ಯಾಭರಣ ಭೂಷಿತರಾಗಿ ಸಿಂಹ ಗರುಡ ವಾಹನಗಳನ್ನೇರಿ ಸಿಂಹ ಗರುಡ ಧ್ವಜಗಳನ್ನೆತ್ತಿಸಿ ಧವಳ ಛತ್ರ ಚಾಮರಗಳನ್ನು ಹಿಡಿಯಿಸಿ ಸುಗ್ರೀವ ಪ್ರಭಾ ಮಂಡಲ ಮರುತ್ತು ತ ವಿಭೀಷಣ ಮೊದಲಾದ ವಿದ್ಯಾಧರರು ಸುತ್ತಿ ಬರಲು ರಣಭೂಮಿಗೆ ಬಂದು ಒಡ್ಡಿನಿಂತರು.
ಆಗ ಎರಡು ಸೇನೆಗಳೂ ಭಯಂಕರವಾಗುವಂತೆ ಕಾದಿದುವು. ರಾವಣನು ಬಹಳ ರೋಷದಿಂದ ವಾನರ ಸೇನೆಯನ್ನು ಎದುರಿಸಲು ಅದು ಬೆಚ್ಚಿ ಓಡಿ ಹೋಯಿತು. ಇದನ್ನು ನೋಡಿ ವಿಭೀಷಣನು ರಾವಣನ ಮೇಲೆ ಯುದ್ಧಕ್ಕೆ ನಿಲ್ಲಲು, ಆತನು ತಮ್ಮನನ್ನು ನೀಚನೆ೦ದು ಬೈದು ದೊರೆಗೆಟ್ಟ ಮನುಷ್ಯನಿಗೆ ಆಳಾದುದಕ್ಕಾಗಿ ನಾನಾವಿಧವಾಗಿ ಮೂದಲಿಸಿ ಒಡಹುಟ್ಟಿದವನ ಮೇಲೆ ಯುದ್ದ ಮಾಡಿ ಗೋತ್ರವಧ ಮಹಾಪಾತಕವನ್ನು ಹೇಗೆ ಕಟ್ಟಿಕೊಳ್ಳಲಿ ಎಂದು ಹೇಳಿ ತನ್ನ ಮುಂದೆ ನಿಲ್ಲದೆ ತೊಲಗಿಹೋಗೆಂದನು. ದಶವದನನ ಈ ದುರುಕಿಗೆ ವಿಭೀಷಣನು ಕೋಪಾವಿಷ್ಟನಾಗಿ ತಾನು ಹೇಳಿದ ಹಿತವನ್ನು ಕೇಳದೆ, ಮೂರು ಲೋಕದಲ್ಲಿಯೂ ಪ್ರಖ್ಯಾತಿ ಹೊಂದಿದ ತೋಯದ ವಾಹನನ ವಂಶಕ್ಕೆ ಕುಂದು ಉಂಟಾಗುವಂತೆ ಪರಸ್ತ್ರೀಯನ್ನು ಬಯಸಿದ ದುರ್ಬುದ್ಧಿಯನ್ನುಳಿದು ಜಗನ್ಮಾತೆಯಾದ ಸೀತಾದೇವಿಯನ್ನು ರಾಮಸ್ವಾಮಿಗೊಪ್ಪಿಸಿ ಸಾಮಾಜ್ಯ ಪದವಿಯಲ್ಲಿ ಸುಖದಿಂದ ನಿಲ್ಲೆಂದು ಬುದ್ಧಿಯನ್ನು ಹೇಳಲು ರಾವಣನು ಬಹಳ ಸಿಟ್ಟಾಗಿ