ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ವಿಮರ್ಶೆಯ ನೆಲೆಗಳು / ೯೫
ವಿಮರ್ಶೆಯ ಅರ್ಹತ

ವಿಮರ್ಶೆಯ ಪರಿಣಾಮ ಮತ್ತು ಸಾರ್ಥಕ್ಯವು ಅದರ- ಅರ್ಥಾತ್ ವಿಮರ್ಶಕನ ಅರ್ಹತೆಯನ್ನು ಹೊಂದಿಕೊಂಡಿದೆಯಷ್ಟೆ. ಸರಿಯಾದ, ವ್ಯವಸ್ಥಿತವಾದ ಸಂವೇಧನೆಯ ನೋಟವಿಲ್ಲದ ವಿಮರ್ಶೆ, ಕಲಾರಂಗಕ್ಕೆ ಉಪಕಾರಕವಾಗುವ ಬದಲು, ಮಾರಕವಾಗುವ ಸಂಭವವಿದೆ. ಯಾವುದೇ ಸಮಗ್ರ ರಂಗಭೂಮಿಯ, ಅದರಲ್ಲೂ, ಯಕ್ಷಗಾನದಂತಹ ಕಲೆಯ ವಿಮರ್ಶೆಯ ಅರ್ಹತೆ ಸುಲಭಸಾಧ್ಯವಲ್ಲ. ರಂಗಭೂಮಿ, ಯಕ್ಷಗಾನದ ಒಟ್ಟು ಶೈಲಿಯ ಸ್ವರೂಪ, ಅದರ ಚಿತ್ರ, ಸಂಗೀತ, ಸಾಹಿತ್ಯ ಮತ್ತು ವಸ್ತುವು ಪ್ರದರ್ಶನವಾಗಿ ಮಾರ್ಪಡುವ ಕ್ರಿಯೆಯ ಸೂಕ್ಷ್ಮಗಳು, ಕಲೆಯ ಪರಂಪರೆ ಇಷ್ಟೆಲ್ಲವನ್ನೂ ಸ್ಥೂಲವಾಗಿಯಾದರೂ ತಿಳಿದಿರುವು ದೆಂದರೆ, ವಿರಳವೇ ಸರಿ. ಅದರ ಮೇಲೆ, ಸುದೀರ್ಘವಾಗಿ ಸಾಗುವ ಯಕ್ಷಗಾನ ಪ್ರದರ್ಶನಗಳನ್ನು ನೋಡಿ, ತಿಳಿದು ವಿಮರ್ಶಿಸುವ ತಾಳ್ಮೆ, ಸಾಧ್ಯತೆ ವಿಮರ್ಶಕನಿಗಿರಬೇಕು. ತುಂಬ ಶಾರೀರಿಕ, ಮಾನಸಿಕ ಶ್ರಮ ವನ್ನು ಬಯಸುವ ಸಂಗತಿ ಇದು. ಯಕ್ಷಗಾನ ಪ್ರದರ್ಶನದ ಒಟ್ಟು ಗಾತ್ರ ದೊಡ್ಡದು. ಹಲವು ಪಾತ್ರಗಳು, ದೀರ್ಘ ಕಥೆ, ದೀರ್ಘ ಅವಧಿ- ಈಯೆಲ್ಲ ಕಾರಣಗಳಿಂದ ಸಂಗೀತ, ನೃತ್ಯ ವಿಮರ್ಶೆಗಿಂತ ಯಕ್ಷಗಾನ ವಿಮರ್ಶೆ ಕಷ್ಟದ ಕೆಲಸ.

ದೂರ - ಅಂತರ

ಕಲೆಯನ್ನು ವಿಮರ್ಶಕನಾದವನು- ಭಯ, ಸಂಶಯ, ಪ್ರೀತಿ, ಆತ್ಮವಿಶ್ವಾಸ, ಅಭಿಮಾನ, ನಿರ್ದಾಕ್ಷಿಣ್ಯ ಇವೆಲ್ಲವನ್ನು ಒಟ್ಟಾಗಿ ಇರಿಸಿಕೊಂಡೇ ನೋಡಬೇಕು. ತನ್ನ ಅರ್ಹತೆಯ ಬಗೆಗೆ ಭಯ, ವೈಭವೀಕರಣವನ್ನು ದೂರೀಕರಿಸಬಲ್ಲ ಧೈರ್ಯ, ಸಂಶಯ, ಕಲೆಯ ಬಗ್ಗೆ ಪ್ರೀತಿ, ತನ್ನ ಯೋಗ್ಯತೆಯ ಬಗೆಗೆ ವಿಶ್ವಾಸ, ವಿನಯ, ಕಲಾವಿದನ ಬಗ್ಗೆ ಅಭಿಮಾನ, ವಿಮರ್ಶೆಗೆ ತೊಡಕಾಗುವ ದಾಕ್ಷಿಣ್ಯವನ್ನು ತೊರೆಯಬಲ್ಲ ಶಕ್ತಿ- ಇವೆಲ್ಲ ಅವನಲ್ಲಿರಬೇಕು. ವಿಮರ್ಶೆಯ ಗುಣವಾದ, ಉಪನಿಷತ್ತಿ ನಲ್ಲಿ ಹೇಳಿದ 'ದೂರ- ಹತ್ತಿರವಾಗುವಿಕೆ' (ತದ್ದೂರೇ ತದಂತಿಕೇ) ಮುಖ್ಯ. ಕಲೆಗೆ ಹತ್ತಿರವಾಗಿದ್ದೂ ಅದನ್ನು ತಟಸ್ಥನಾಗಿ, ಅಭಿಮಾನ, ಉದ್ರೇಕಗಳಿಲ್ಲದೆ ನೋಡಬಲ್ಲ ಚಿತ್ತಸ್ಥೈರ್ಯ ಮತ್ತು ಕಂಡುದನ್ನು ಹೇಳಬಲ್ಲ ಧೈರ್ಯ ಇರಬೇಕು.