ಈ ಪುಟವನ್ನು ಪ್ರಕಟಿಸಲಾಗಿದೆ

೧೨ / ವಾಗರ್ಥ

ಮುಂದೇನು? ಆಗ ನೀವೇನು ಮಾಡಿದಿರಿ? ಏನು ನಿಮ್ಮ ಆಲೋಚನೆ? ಇತ್ಯಾದಿ ಪ್ರಶ್ನೆಗಳು ಭಾಗವತನಿಂದ ಬಂದಾಗ ಪಾತ್ರಧಾರಿಗೆ ಅದು ಸೂಚನೆ.

ಆ ಎತ್ತುಗಡೆ ಎಂಬುದನ್ನು ಪ್ರತಿಭಾವಂತನು ತುಂಬ ಕಲಾತ್ಮಕವಾಗಿ ಏರ್ಪಡಿಸಬಹುದು. ಇದರಲ್ಲಿ ವ್ಯಕ್ತಿ, ಪ್ರಾದೇಶಿಕ ಭೇದ (ತಿಟ್ಟು) ತಂಡದ ಪರಂಪರೆಗಳಿಗನುಸರಿಸಿ ಹಲವು ಸೂಕ್ಷ್ಮ ಪ್ರಭೇದಗಳಿವೆ. ಕೆಲವರು ಪದ್ಯಕ್ಕೆ ಪರೋಕ್ಷವಾಗಿ ಬಂದು ಹೊಂದಿಸುವ ರೀತಿಯಿಂದ ಮಾತಾಡುತ್ತಾರೆ. ಉದಾ: ಭೀಷ್ಮಪರ್ವದ ಭೀಷ್ಮನ ಪದ್ಯ :

ಎಲೆ ಮರುಳೆ ಕರ್ಣಾದಿ ದುಷ್ಕರ ಬಳಸಿನಲಿ
ಕೇಡಾದೆ ವಂಶಕೆ...

ಇಲ್ಲಿ 'ಎಲಾ, ಮರುಳೆ, ದುರ್ಯೋಧನ' ಎಂದು ನೇರವಾಗಿ ಹೇಳುವು ದೊಂದು ಕ್ರಮ. ಬದಲಾಗಿ, 'ಮಗೂ, ನಾನು ಹೇಳಬಾರದು, ಆದರೆ ನಿನ್ನ ವರ್ತನೆಗೆ ಬೇರೆ ಏನು ಹೇಳಲಿ?' ಎಂದು ಮರುಳಾಟ ಎಂಬುದನ್ನು ಧ್ವನಿಸುವುದೊಂದು ಕ್ರಮ.

ಎತ್ತುಗಡೆ ಇರುವಂತೆ, 'ಹಾರಿಸುವಿಕೆಯೂ' ಇರುತ್ತದೆ. ಒಂದು ಕಥೆಯಲ್ಲಿ ಕೆಲವು ಅಂಶಗಳನ್ನು ಬಿಟ್ಟು ಮುಂದಕ್ಕೆ ಹೋಗುವಾಗ, ಸಂಬಂಧಿತ ಪಾತ್ರಧಾರಿಯು, ಪ್ರದರ್ಶನದಲ್ಲಿ ಹಾರಿಸಿದ (ಬಿಟ್ಟ) ಅಂಶ ವನ್ನೂ ಸಂಕ್ಷೇಪವಾಗಿ ಹೇಳಿ ಮುಂದುವರಿಸುವುದೊಂದು ಕ್ರಮವಾದರೆ, ಬಿಟ್ಟುಬಿಟ್ಟ ಭಾಗವನ್ನು ಮಾತಿನಲ್ಲೂ ಹೇಳದೆ ನೇರವಾಗಿ ಮುಂದಿನ ಆಯ್ದ ದೃಶ್ಯದಲ್ಲಿ ಮಾತು ತೊಡಗುವುದು ಇನ್ನೊಂದು ಕ್ರಮ.

ಯಕ್ಷಗಾನದ ಮಾತುಗಾರಿಕೆಯ ಇನ್ನೆರಡು ಅಂಶಗಳೆಂದರೆ ಸ್ವರ- ಕಾಕುಗಳು ಮತ್ತು ಒಳಗಿಂದ ಮಾತಾಡುವುದು. ಹೂಂಕಾರಗಳೂ ಮಾತಿನ ಅಂಗಗಳೇ. ಹುಂ, ಉಹುಂ, ಹ್೦ಗಳಲ್ಲೇ ಹತ್ತು ಹಲವು ಬಗೆಗಳ ಭಾವಾಭಿವ್ಯಕ್ತಿ ಸಾಧ್ಯ. ಅದೇ ರೀತಿ, ಬಣ್ಣದ ವೇಷ (ರಾಕ್ಷಸ), ಹನುಮಂತ, ಕಿರಾತ, ಕಿರಾತ ಪಡೆ ಮೊದಲಾದವರಿಗೆ ವಿಶಿಷ್ಟವಾದ ಬೊಬ್ಬೆಗಳಿರುತ್ತವೆ. ಬಣ್ಣದ ವೇಷಗಳ ಬೊಬ್ಬೆಗಳಿಗೆ ಆರ್ಭಟೆ ಅಥವಾ ಅಟ್ಟಾಸು (ಅಟ್ಟಹಾಸ) ಎನ್ನುವರು. ಇವು ಮುಖ್ಯವಾಗಿ ಮೂರು ಬಗೆ-