ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಕ್ರಿಯಾತ್ಮಕತೆ / ೪೧

ದಲ್ಲಿ ತಾಳಮದ್ದಳೆಯು ಅತ್ಯಂತ ಪ್ರೌಢವಾದ ಸಾಧನೆ ಮಾಡಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ಭಾಗವಹಿಸುತ್ತಿರುವ ಪಾತ್ರಧಾರಿಗಳ ಅಧ್ಯಯನವೂ, ದೃಷ್ಟಿಗಳೂ ವಿಭಿನ್ನವಾಗಿರುವುದರಿಂದ ಇಂತಹ ಚಿತ್ರಣಕ್ಕೆ, ಏಕವ್ಯಕ್ತಿಕೃತ ಕೃತಿಗಳಿಗಿಂತ ಪ್ರತ್ಯೇಕವಾದ ಸ್ವರೂಪವು ಒದಗಿ ಬರುವುದೂ ಗಮನಾರ್ಹ, ಸಂಸ್ಕೃತಿಯ 'ಗುರುತಿಸುವಿಕೆ ಮತ್ತು ಅರ್ಥೈಸುವಿಕೆಗಳ ಮೂಲಕ ಅರ್ಥಪೂರ್ಣ ಸಾಂಸ್ಕೃತಿಕ ಸಂವಹನ ಮತ್ತು ಸಂವಾದಗಳನ್ನು ಈ ಮಾಧ್ಯಮವು ಸಾಧಿಸಿದೆ.

ಕಾವ್ಯ, ಕಾದಂಬರಿ, ನಾಟಕಾದಿ ಕೃತಿಗಳ ಪಾಠವು ಸ್ಥಿರ. ಅದರ ವಿಮರ್ಶೆಯೂ, ಅರ್ಥವೂ ಕಾಲ, ದೇಶಾನುಗುಣವಾಗಿ ವಿಭಿನ್ನವಾಗುತ್ತ ಹೋಗುತ್ತದೆ. ಆದರೆ, ತಾಳಮದ್ದಳೆಯಲ್ಲಿ ಅದರ 'ಸ್ಥೂಲಮೂಲ' ವಾದ ಪ್ರಸಂಗವು ಮಾತ್ರ ಸ್ಥಿರ. ಅದರ ಇನ್ನೊಂದು ಪಾಠವಾದ - ಇದೇ ಮುಖ್ಯ. ಮಾತುಗಾರಿಕೆಯು ಪ್ರತಿಯೊಂದು ಪ್ರದರ್ಶನಕ್ಕೂ ವಿಭಿನ್ನ. ಕಲಾವಿದ ಸಾಪೇಕ್ಷವಾಗಿ ಪುನಃ ಭಿನ್ನಭಿನ್ನ, ಹೀಗಾಗಿ ಇದಕ್ಕೆ ಕಾಲಾನು ಗುಣವಾಗಿ, ಬದಲಾಗುವ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಿಗನುಸರಿಸಿ, ಚಲನಶೀಲವಾಗುವಲ್ಲಿ ಅದ್ಭುತವಾದ ಯೋಗ್ಯತೆಯುಂಟು, ಎಂದರೆ ಅತಿಶಯೋಕ್ತಿಯಲ್ಲ.

ಸಾಂಸ್ಕೃತಿಕ ಸಂದರ್ಭಗಳಿಗೆ ತಾಳಮದ್ದಳೆಯು ಸ್ಪಂದಿಸುತ್ತ ಬಂದಿದೆ ಎಂಬುದಕ್ಕೆ ಉದಾಹರಣೆಯಾಗಿ ಕೆಲವು ಪಾತ್ರಚಿತ್ರಣಗಳಲ್ಲಾದ ಬದಲಾವಣೆಗಳನ್ನು ಹೇಳಬಹುದು. ಮೊದಲಾದರೆ, ಕೃಷ್ಣನಂತಹ ಪಾತ್ರದ ಅರ್ಥದಾರಿಯು ಪೀಠಿಕೆಯಲ್ಲಿ ತಾನು ಭೂಭಾರ ಹರಣಾರ್ಥವಾಗಿ ಬಂದ ಅವತಾರಿ ಎಂಬುದನ್ನು ಹೇಳುವುದು ಮಾನ್ಯವಾಗಿತ್ತು. ಅರ್ಥದಾರಿ ಅದನ್ನು ತುಂಬ ಸೀರಿಯಸ್ಸಾಗಿಯೇ ಹೇಳುತ್ತಿದ್ದ. ಈಗ ಕತೆಗಾಗಿ ಹೇಳಲೇಬೇಕಾದ ಸಂದರ್ಭಗಳನ್ನು ಬಿಟ್ಟು, ಉಳಿದ ಸಂದರ್ಭ ಗಳಲ್ಲಿ ಕೃಷ್ಣನು ಮನುಷ್ಯನೆಲೆಯಲ್ಲಿ ಮಾತಾಡಬೇಕು ಎಂಬುದು ಪಾತ್ರಧಾರಿಗಳ, ಹಾಗೆಯೇ ಶ್ರೋತೃಗಳ ಅಭಿಮತವಾಗಿ ಬಂದಿದೆ.

ರಾಮನು ವಾಲಿವಧೆಯನ್ನು ಸಮರ್ಥಿಸುವಾಗ, ತಾನು ಲೋಕ ಕಲ್ಯಾಣಾರ್ಥವಾಗಿ ಚರಿಸುವ ಅವತಾರಿ ಎಂದು ಹೇಳುವ ಕ್ರಮವಿತ್ತು.