ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ನಟ-ವ್ಯಕ್ತಿ ಸಂಬಂಧ, ಪಾತ್ರ ಸೃಷ್ಟಿ / ೬೧

ಅರ್ಥಾತ್ ವಿದ್ವತ್ತು, ಇಂದಿಗೂ ಸಮಾಜದಲ್ಲಿ ನಾವು ಕಾಣುವ ಜೀವನ ಚಿತ್ರಗಳು, ಘಟನೆಗಳು, ಪ್ರದರ್ಶನದ ಆಧಾರವಾದ ಪ್ರಸಂಗಕಾವ್ಯ, ಪ್ರಸಂಗ ನಡೆಯುವ ಸ್ಥಳ, ಕಾಲಮಿತಿ, ಭಾಗವತನೂ, ಇತರ ಕಲಾವಿದರೂ ನೀಡುವ ಪ್ರೇರಣೆಗಳು ಮತ್ತು ಪ್ರೇಕ್ಷಕ ವೃಂದದ ಪ್ರತಿಕ್ರಿಯೆಗಳು (ಒಟ್ಟಾಗಿ ಪ್ರದರ್ಶನ ಸಂದರ್ಭ - context) ಹೀಗೆ ಕಥೆ, ಪಾತ್ರ, ಸಮಾಜದ ಕೊಡುಗೆ, ರಂಗಸಂದರ್ಭಗಳನ್ನು ಗ್ರಹಿಸಿ, ಮೇಳೈಸಿ ಪಾತ್ರವನ್ನು ಕಟ್ಟುತ್ತ ಹೋಗುವಂತಹ ಕೆಲಸ- ಕಲಾವಿದನ ವೈಯಕ್ತಿಕ ಪ್ರತಿಭೆಗೆ, ಸಾಮರ್ಥ್ಯಕ್ಕೆ, ದೃಷ್ಟಿಗೆ ಸಂಬಂಧಿಸಿದ್ದು. ನಟನ ಸಂವೇದನಾಶೀಲತೆ, ಬುದ್ಧಿವಂತಿಕೆ, ಸ್ವಭಾವಗಳನ್ನು ಅರ್ಥೈಸುವ ಮತ್ತು ಅಭಿವ್ಯಕ್ತಿಸುವ ಶಕ್ತಿಗಳನ್ನು, ಮೇಲೆ ಹೇಳಿದ ಅಂಶಗಳ ಪರಿವೇಶದಲ್ಲಿ ಕೇಂದ್ರೀಕರಿಸಿ ದುಡಿಸುವ ಅರ್ಥದಾರಿಯ ವೈಯಕ್ತಿಕತೆ, ಇಲ್ಲಿ ಬಹು ಮುಖ್ಯವಾದದ್ದು. ಏಕೆಂದರೆ, ಸಿದ್ಧ ಪಾಠವಿಲ್ಲದೆ ಮಾತುಗಳನ್ನು ತಾನೇ ರಚಿಸುವುದರಿಂದ ಈ ವೈಯಕ್ತಿಕತೆಗೆ ಅಸಾಧಾರಣ ಮಹತ್ವ ಬರುವುದು.

ಈ ಪಾತ್ರರಚನಾ ಕಾವ್ಯದಲ್ಲಿ, ವಾಸ್ತವ ಮತ್ತು ಅವಾಸ್ತವಗಳ ಮಧ್ಯೆ, ಪುರಾಣ ಮತ್ತು ಆಧುನಿಕತೆಗಳ ನಡುವೆ, ಕಲಾವಿದನ ವೈಯಕ್ತಿಕ ನಿಲುಮೆ ಮತ್ತು ಕೂಟ ಮನೋಧರ್ಮ (ಟೀಮ್ ಸ್ಪಿರಿಟ್), ಪಾತ್ರದ ಸ್ವಭಾವ ಮತ್ತು ಪಾತ್ರಧಾರಿಯ ಸ್ವಭಾವಗಳೊಳಗೆ- ಹೀಗೆ ನಾಲ್ಕಾರು ನಿಟ್ಟಿನಲ್ಲಿ ಸತತವಾದ ಸಂಘರ್ಷ, ಕೊಡು ಕೊಳುಗೆ ನಡೆಯುತ್ತ ಇರುತ್ತದೆ. ಈ ಸಂಕೀರ್ಣ ಪ್ರಕ್ರಿಯೆಯ ಜೊತೆಗೆ ಪಾತ್ರವೂ, ಒಟ್ಟು ಪ್ರದರ್ಶನವೂ ರೂಪುಗೊಳ್ಳುತ್ತ ಹೋಗುವ ರೀತಿ ಕುತೂಹಲಕರ: ರೋಮಾಂಚಕ, ಈ ಪ್ರಕ್ರಿಯೆಯ ಕೇಂದ್ರದಲ್ಲಿ ಅರ್ಥದಾರಿ ಎಂಬ ನಟನ ಕ್ರಿಯಾಶೀಲವಾದ ಮನಸ್ಸು ಇದೆ. ಸಿದ್ದಲಿಖಿತ ನಾಟಕದ ನಟನ ಕ್ರಿಯಾಶೀಲತೆ, ಅವನಿಗೆ ದತ್ತವಾದ ಪಾಠವನ್ನಾಧರಿಸಿ, ಸೃಜನಶೀಲ ವ್ಯಾಖ್ಯಾತ್ಮಕ ನೆಲೆಗಳಲ್ಲಿ ಪಾತ್ರಗಳ ಬಗೆಗಿನ ತನ್ನ ನೋಟವನ್ನು ಕೊಡುವುದಾದರೆ, ಇಲ್ಲಿ ಅರ್ಥದಾರಿ ಪಾಠವನ್ನು ತಾನೇ ಸಿದ್ಧಪಡಿಸು ತ್ತಿರುವುದರಿಂದ, ಅರ್ಥದಾರಿಯ ವ್ಯಕ್ತಿಗತ ಸಾಮರ್ಥ್ಯ, ಇತರರ ಸ್ಪಂದನ, ಕಲಾವಿದನ ಸ್ವಂತ ದೃಷ್ಟಿಕೋನಗಳ ಮಹತ್ವವನ್ನು ಪ್ರತ್ಯೇಕ ವಿವರಿಸಬೇಕಾಗಿಲ್ಲವಷ್ಟೆ. ಆಗ ಅವನು ಸಮಕಾಲೀನ ಪ್ರೇರಣೆಗಳನ್ನು, ಪ್ರಾಚೀನ ವಸ್ತುವಿಗೆ ಹೊಂದಿಸುವಲ್ಲಿ ಎಷ್ಟು ಯಶಸ್ವಿಯಾಗುತ್ತಾನೋ ಅಷ್ಟು ಅವನ ಅರ್ಥಗಾರಿಕೆ ಉತ್ತಮವಾಗುತ್ತ ಹೋಗುತ್ತದೆ.