ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ನಟ-ವ್ಯಕ್ತಿ ಸಂಬಂಧ, ಪಾತ್ರ ಸೃಷ್ಟಿ / ೬೩

ಕೆಲವೊಮ್ಮೆ ಭಿನ್ನರೀತಿಯಲ್ಲಿ ಪಾತ್ರಗಳನ್ನು ಹಂಚಿದಾಗ- ಮುಖ್ಯ ಕಲಾವಿದನ ಪಾತ್ರವೇ ಮುಖ್ಯವಾಗಿ, ಪಾತ್ರಗಳ ಸ್ಥಾನದಲ್ಲೇ ವ್ಯತ್ಯಾಸ ಉಂಟಾಗಿಬಿಡುತ್ತದೆ. ಇದು ಪಾತ್ರಧಾರಿಗಳ ವ್ಯಕ್ತಿ ವರ್ಚಸ್ಸಿನ ನೇರ ಪ್ರಭಾವದ ಉದಾಹರಣೆಯಾಗಿದೆ. ಕೆಲವು ಪಾತ್ರಧಾರಿಗಳಿಗಾಗಿಯೇ ಒಂದು ಪ್ರಸಂಗವನ್ನು ಆರಿಸಿಕೊಳ್ಳುವುದು (ಉದಾ: ಶೇಣಿ ಅವರಿಗಾಗಿ ರಾವಣ ವಧೆ, ಕುಂಬಳೆ ಸುಂದರ ರಾಯರಿಗಾಗಿ ಭರತಾಗಮನ) ಪ್ರಸಿದ್ಧ ವಷ್ಟೆ. ಹಾಗೆಯೇ ಆ ಪಾತ್ರಧಾರಿ ಅನುಪಸ್ಥಿತನಾದರೆ, ಆ ಪ್ರಸಂಗವೇ ಬೇಡ, ಬೇರೆ ಮಾಡೋಣ ಎನ್ನುವುದೂ ಇದೆ.

ಕಲಾವಿದನ ಸ್ಥಾನಮಾನ (Actor status)ದ ಇನ್ನೊಂದು ಪರಿಣಾಮವೆಂದರ ಅರ್ಥಗಾರಿಕೆಯು ಪ್ರೇಕ್ಷಕನಲ್ಲಿ ಉಂಟುಮಾಡುವ ಪರಿಣಾಮ. ಓರ್ವ ಪ್ರಮುಖ ಕಲಾವಿದನು ಹೇಳಿದ ಒಂದು ವಿಷಯ ಅಥವಾ ಒಂದು ಹಾಸ್ಯಚಟಾಕಿ ಮಾಡುವ ಪರಿಣಾಮ, ಅದೇ ಮಾತನ್ನು ಓರ್ವ ಅಷ್ಟು ಮುಖ್ಯನಲ್ಲದ ಕಲಾವಿದ ಹೇಳಿದಾಗ ಆಗುವುದಿಲ್ಲ.

ಪ್ರಶೋತ್ತರ, ಸಂವಾದ, ಖಂಡನ, ಮಂಡನಗಳಲ್ಲೂ ಪ್ರೇಕ್ಷಕ- ಕಲಾವಿದ, ಕಲಾವಿದ-ಕಲಾವಿದ ಸಂಬಂಧದ ಪರಿಣಾಮ ಬೀರುತ್ತದೆ. ಕೇಳಬೇಕಾದ ಪ್ರಶ್ನೆಯನ್ನೇ ಕೇಳಿದರೂ ಕೆಲವರಿಗಾದರೂ "ಇವನಿಗೇಕೆ ಅವರಲ್ಲಿ ಪ್ರಶ್ನೆ ಕೇಳುವ ಕೆಲಸ?” ಎಂದೆನಿಸದಿರುವುದಿಲ್ಲ. ಹೊಸ ಕಲಾವಿದರಂತೂ ಕೆಲವು ಪ್ರಸಿದ್ಧ ಕಲಾವಿದರೊಂದಿಗೆ ಭಾಗವಹಿಸುವುದಕ್ಕೆ ಅಂಜುತ್ತಾರೆ. ಹೊಸಬನಿಗೆ ತನ್ನನ್ನು ಸಭೆಯಲ್ಲಿ ಸ್ಥಾಪಿಸಿಕೊಳ್ಳುವುದಕ್ಕೆ ಸ್ವಲ್ಪ ಹೊತ್ತು ಹಿಡಿಯುತ್ತದೆ. ಇದರ ಜತೆಗೆಯೇ ಹೊಸ ಕಲಾವಿದನಲ್ಲಿ ಸ್ವಲ್ಪಮಟ್ಟಿನ ಯೋಗ್ಯತೆಯಿದ್ದಾಗ ಅನುಕಂಪ, ಪ್ರೋತ್ಸಾಹ (sympathy, encouragement) ಕೂಡ ಒದಗಿ ಬರುವುದುಂಟು.

ಪಾತ್ರಧಾರಿಗಳು ಆಡುವ ಮಾತಿನಲ್ಲಿ ವೈಯಕ್ತಿಕ ಶ್ರೇಷೆಗಳನ್ನು ಜನ ಗುರುತಿಸುವುದುಂಟು. ಕೆಲವು ಸಲ ಇದು ಆಯಾಚಿತವಾಗಿ ನಡೆಯು ವಂತಹದು (ಉದಾ: ನೀನೊಬ್ಬ ಪಂಡಿತನಾಗಿ ಹೀಗೆನ್ನಬಹುದೆ? ನೀನು ದೊಡ್ಡ ಹರಿಭಕ್ತನಲ್ಲವೆ? ನನ್ನ ಮುಂದೆ ನೀನೆಷ್ಟರವನು? ನಿನ್ನ ಬಗೆಗೆ ಬಹಳ ಕೀರ್ತಿ ಹಬ್ಬಿದೆಯೆಂದು ಗರ್ವಿಸಬೇಡ ಇಂತಹ ಮಾತುಗಳಿಗೆ ಇದು ವೈಯಕ್ತಿಕವೆಂದೇ ಜನ ಗುರುತಿಸುತ್ತಾರೆ. ಆದರೆ, ಮಾತಾಡಿದವನ ಉದ್ದೇಶ ಹಾಗಿರುವುದಿಲ್ಲ.) ಕೆಲವೊಮ್ಮೆ ಅದೊಂದು ವಿನೋದವಾಗಿ ಬರಬಹುದು. (ನೀನೇನು ಮಹಾವಾದಿಯೆ? ವಕೀಲ ಎಂಬರ್ಥ;