ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ನಟ-ವ್ಯಕ್ತಿ ಸಂಬಂಧ, ಪಾತ್ರ ಸೃಷ್ಟಿ / ೬೫

ಪಾತ್ರವು ಪ್ರಾಚೀನದಿಂದ ಅರ್ವಾಚೀನಕ್ಕೆ ಜಿಗಿಯುತ್ತ, ತರ್ಕದೃಷ್ಟಿ ಮತ್ತು ಕಾವ್ಯಾತ್ಮಕತೆಗಳ ತುಯ್ದಾಡುತ್ತ, ಶೇಣಿ ಅವರ ವ್ಯಕ್ತಿತ್ವದಲ್ಲಿ ತುಂಬ ಮುಖ್ಯವಾಗಿರುವ ಸ್ವಸ್ಥಾಪನೆ ಅಥವಾ ಅನ್ಯಾಕ್ರಮಣಶೀಲತೆಯ ಬಣ್ಣವನ್ನು ಪ್ರಕಟಿಸುತ್ತ ರೂಪುಗೊಳ್ಳುತ್ತಿರುವ ಅತ್ಯದ್ಭುತವಾದ ಕಲಾಕ್ರಿಯೆಯು ಅಭ್ಯಾಸಯೋಗ್ಯವಾಗಿದೆ.

ಶ್ರೀ ಪೆರ್ಲ ಕೃಷ್ಣಭಟ್ಟರ ಅರ್ಥವನ್ನು ಕೇಳುವಾಗ- ಓರ್ವ ಸರಳ, ಗಂಭೀರ ಮತ್ತು ವ್ಯವಸ್ಥಿತ ಸ್ವಭಾವದ ವ್ಯಕ್ತಿಯ ಚಿತ್ರವು, ಆ ಪಾತ್ರ ಗಳನ್ನು ವ್ಯಾಪಿಸುವುದನ್ನೂ, ತೆಕ್ಕಟ್ಟೆ ಆನಂದ ಮಾಸ್ತರರ ಅರ್ಥಗಾರಿಕೆ ಯಲ್ಲಿ ಗಾದೆ, ಒಗಟು, ಹಳ್ಳಿಯ ವಾಗ್ರೂಢಿಗಳ ಮೂಲಕ ಜಾನಪದ ಸತ್ವವು ಹೊರಹೊಮ್ಮುವುದನ್ನೂ ಕಾಣುತ್ತೇವೆ. ಹೀಗೆಯೇ ಹಲವು ಉದಾಹರಣೆಗಳನ್ನು ನೀಡಬಹುದು. (ಈ ಲೇಖಕನು ಆಧುನಿಕ ಸಾಹಿತ್ಯದ ಓದನ್ನು ಅರ್ಥಗಾರಿಕೆಯಲ್ಲಿ ತಂದಿರುವುದನ್ನು ಇಲ್ಲಿ ಪ್ರಸ್ತಾವಿಸಬಹುದು).

ಹಿರಿಯ ನಾಟಕಕಾರ, ತಜ್ಞ, ಬ್ರೆಕ್ಟ್ ವಾದದ ರಂಗಭೂಮಿ (Theatre of arguement) ಬಗ್ಗೆ ಹೇಳಿದ. ತಾಳಮದ್ದಳೆ ಅಂತಹದು. ಇಲ್ಲಿ ಪ್ರತಿ ನಿಮಿಷ ಎಂಬಂತೆ ವಾದ, ಸಂವಾದ, ವಿವಾದಗಳ ಸಾಧ್ಯತೆ ಇದೆ. ಒಂದು ವಿಶೇಷ ಎಂದರೆ, ತರ್ಕಕ್ಕೆ ಸಿಗದ ಅಥವಾ ತರ್ಕಾತೀತತೆಯೇ ಮುಖ್ಯವಾಗಿರುವ ಪ್ರಾಚೀನ ಪುರಾಣಕಾವ್ಯಾದಿಗಳ ಕತೆ- ಇಲ್ಲಿ ವಾದಕ್ಕೆ ವಸ್ತುವಾಗುವುದು. ಪಾತ್ರಧಾರಿಯ ಬೌದ್ಧಿಕತೆಯ ಮಟ್ಟ ಮತ್ತು ಸ್ವರೂಪ ಬಹಳ ಮುಖ್ಯವಾಗುತ್ತದೆ.

ಒಂದೇ ಬಗೆಯ ಪ್ರಶ್ನೆಗೆ ಒಬ್ಬೊಬ್ಬ ಕಲಾವಿದನ ಪ್ರತಿಕ್ರಿಯೆ, ಉತ್ತರ, ಪ್ರತಿಪ್ರಶ್ನೆ ಒಂದೊಂದು ರೀತಿಯಾಗಿರಬಹುದು; ಆಗಿರುತ್ತದೆ. ಒಬ್ಬನ ಉತ್ತರ ದೀರ್ಘವಾಗಿರಬಹುದು. ಮತ್ತೊಬ್ಬನದು ಪುರಾಣಾ ಧಾರಿತವಾಗಿ, ಇನ್ನೊಬ್ಬನದು ಲೌಕಿಕ ಅನುಭವ ರೂಪದ್ದು- ಹೀಗಿರ ಬಹುದು. ಮತ್ತೊಬ್ಬನಿಗೆ ಈ ಪ್ರಶ್ನೆಯನ್ನು ಆ ಪಾತ್ರ ಉತ್ತರಿಸ ಬೇಕಾಗಿಲ್ಲ ಅನಿಸಬಹುದು. (ಉದಾ : ವಾಲಿಯ ಎಲ್ಲ ಪ್ರಶ್ನೆಗಳನ್ನು ರಾಮನು ಉತ್ತರಿಸಬೇಕಾಗಿಲ್ಲ ಎಂಬುದು ನನ್ನ ನಿಲುಮೆ, ದುರ್ಯೋಧನ ನಂತಹ ಪಾತ್ರ, ಪ್ರಶ್ನೆಗಳನ್ನು ಹಾರಿಸುವುದು ಕೂಡ ಪಾತ್ರಚಿತ್ರಣವಾಗ ಬಹುದು).