ಈ ಪುಟವನ್ನು ಪ್ರಕಟಿಸಲಾಗಿದೆ

೭೮ / ವಾಗರ್ಥ

ಮೂಲ, ಪರಿಕರ ಎನ್ನಬಹುದು. ನಮ್ಮ ಹೆಚ್ಚಿನ ಸಾಂಪ್ರದಾಯಿಕ ಪ್ರಸಂಗಗಳು ಆಶಯ ಮತ್ತು ಕಥಾರೂಪದಲ್ಲಿ ಕುಮಾರವ್ಯಾಸ, ಲಕ್ಷ್ಮೀಶ, ತೊರವೆ ನರಹರಿ, ಚಾಟುವಿಠಲ ಇವರನ್ನು ಅನುಸರಿಸುತ್ತವೆ. ಈಗ ಅದೇಷ್ಟೊ ಬೇರೆ ಬೇರೆ ಮೂಲಗಳಿಂದ ಆಯ್ದ ಕಥೆಗಳು ಪ್ರಸಂಗಗಳಾಗಿ ಬಂದಿವೆ. ಒಂದು ದೊಡ್ಡ ಕಥಾನಕದ (ರಾಮಾಯಣ, ಭಾರತ) ವಿವಿಧ ಭಾಗಗಳು ಪ್ರಸಂಗಗಳಾಗಿದ್ದು, ಪ್ರಸಂಗಗಳನ್ನು ಒಂದು ದೊಡ್ಡ ಆಕರವಾಗಿ ಗಣಿಸಬಹುದು. ಹೀಗೆ ಆಕರಸಾಮಗ್ರಿ, ವಿಪುಲ ವಾಗಿದ್ದು ಅವುಗಳೊಳಗೆ ಭಿನ್ನತೆಗಳು ಹಲವು ಇವೆ. ಮೂಲಕ್ಕೂ ಕನ್ನಡ ಭಾರತಕ್ಕೂ ವ್ಯತ್ಯಾಸಗಳು ಬಹಳಷ್ಟು ಇವೆ. ಒಂದು ಪ್ರಸಂಗಕ್ಕೂ, ಇನ್ನೊಂದು ಪ್ರಸಂಗಕ್ಕೂ ಒಂದೇ ಕತೆಯಲ್ಲಿ ವ್ಯತ್ಯಾಸಗಳಿವೆ. ಮೂಲ ಆಕರಕ್ಕೂ ಅದನ್ನಾಧರಿಸಿ ಬೆಳೆದ ಕೃತಿಗಳಿಗೂ ವ್ಯತ್ಯಾಸಗಳಿವೆ. ರಂಗ ದಲ್ಲಿನ ಪಾತ್ರಗಳ ಸಂವಾದದಲ್ಲಿ ಈ ವ್ಯತ್ಯಾಸಗಳು ಪರಿಣಾಮ ಬೀರುವುದು ಸಹಜ.

ಈ ಸಮಸ್ಯೆಯು ಹಿಂದೆ, ಎಂದರೆ,..ಯಕ್ಷಗಾನದ ಮಾತುಗಾರಿಕೆಯು ಸಂಕೀರ್ಣವಾಗಿ ಬೆಳೆಯದಿದ್ದಾಗ ಮತ್ತು ಆ ಅಂಗೀಕೃತ ಆಕರ ಸಾಮಗ್ರಿಯು ಮಿತವಾಗಿದ್ದಾಗ ಅಷ್ಟಾಗಿ ಇರಲಿಲ್ಲ. ಪೌರಾಣಿಕತೆಯನ್ನು ಒಪ್ಪಿ, ಪಾತ್ರಗಳ ಸ್ವಭಾವ ಸ್ವರೂಪವನ್ನು ಮೊದಲೇ ಒಂದು ಸೀಮೆ ಗೊಳಪಡಿಸಿ ಕಲಾವಿದರು ಪಾರಂಪರಿಕವಾದ 'ಒಪ್ಪಂದ' ಎಂದರೆ ಸಹಜವಾದ 'ಚಾಲ್ತಿ'ಯಿಂದ ನಿರ್ವಹಿಸುತ್ತಿದ್ದಾಗ ಆಕರಗಳೊಳಗಿನ ಘರ್ಷಣೆಯ ಸಮಸ್ಯೆ ಕಾಣಿಸುತ್ತಿದ್ದುದು ವಿರಳ. ಆದರೆ ಕಲಾವಿದರು ಓದುವಿಕೆಯ ಭಿನ್ನತೆಗಳು, ಪುರಾಣ ವಿಮರ್ಶಾ ಸಾಹಿತ್ಯ ಅಧ್ಯಯನ, ಪುರಾಣಾಧಾರಿತ ಕಾದಂಬರಿ, ನಾಟಕಾದಿಗಳ ಪ್ರಭಾವ, ಇತರ ಅರ್ವಾಚೀನ ಸಾಹಿತ್ಯಕ ಪ್ರಭಾವ ಬೆಳೆದಂತೆ ಕಲೆಯೊಳಗೆ ನಿಶ್ಚಿತವಾಗಿ ನಿಂತಿದ್ದ ಸಂರಚನೆ ಬದಲಾಯಿತು ಅಥವಾ ವಿಸ್ತರಿಸಿತು.

ಪಾತ್ರಧಾರಿಗೆ ತುರ್ತಿನ ಆಕರ ಪ್ರಸಂಗ ಕಾವ್ಯ. ಅದನ್ನು ಕತೆಯ ರೂಪದ ಮಟ್ಟಿಗೆ ಅವನು ಮೀರಿಹೋಗುವಂತಿಲ್ಲ: ಹೋಗಬಾರದು. ಪಂಚವಟಿ ಪ್ರಸಂಗದಲ್ಲಿ ಶೂರ್ಪನಖಿಯು, ಮಾಯಾರೂಪದಿಂದ ತರುಣಿಯಾಗಿ ಬಂದಳೆಂದಿದೆ. ಅದನ್ನು ಬಿಟ್ಟು ಮೂಲ ರಾಮಾಯಣ ವನ್ನು ಆಧರಿಸಿ, ನಾನೀಗ ಹೀಗೆ ನೇರವಾಗಿ ರಾಮನಲ್ಲಿ ಹೋಗುತ್ತೇನೆ ಎಂದು ಶೂರ್ಪನಖಿಯ ಪಾತ್ರ ಹೇಳುವಂತಿಲ್ಲ. ಆದರೆ, ಮುಂದೆ