ಈ ಪುಟವನ್ನು ಪ್ರಕಟಿಸಲಾಗಿದೆ

ದೋಷವಾಗಿ ಕಾಣುತ್ತಿರಲಿಲ್ಲ) ಇವರಿಗಿಂತ ಪ್ರತ್ಯೇಕವಾದ ಧ್ವನಿಯುಕ್ತ, ಸಂಕ್ಷಿಪ್ತ, ರಸಾತ್ಮಕ ಶೈಲಿ ದೇರಾಜೆ ಸೀತಾರಾಮಯ್ಯನವರದು, ಪಾಂಡಿತ್ಯ, ವಾದ, ತರ್ಕಗಳಲ್ಲಿ ಈ ಅರ್ಥಧಾರಿಗಳ ಜತೆ ಸ್ಪರ್ಧೆಗಿಳಿಯದ ದೇರಾಜೆಯವರು ತಮ್ಮ ಪ್ರತಿಭೆಯಿಂದ ಮಾತ್ರವೇ ಮೆರೆದರು. ಆದರೆ ಜೋಶಿಯವರು ಪ್ರಧಾನ ವೇದಿಕೆಗೆ ಪ್ರವೇಶಿಸುವ ಕಾಲಕ್ಕೆ ದೇರಾಜೆಯವರು ನಿವೃತ್ತಿಯತ್ತ ಸಾಗಿದ್ದರು.

ಘಟಾನುಘಟಿ ಅರ್ಥಧಾರಿಗಳ ಎದುರು ತನ್ನದೇ ವೈಶಿಷ್ಟ್ಯದಿಂದ ಕಾಣಿಸಿಕೊಂಡ ದೇರಾಜೆಯವರ ಮಾದರಿ ಜೋಶಿಯವರಿಗೆ ಪ್ರಿಯವಾಗಿದ್ದರೆ ಅಚ್ಚರಿಯಿಲ್ಲ. ಯಾಕೆಂದರೆ ಅವರ ಅರ್ಥಗಾರಿಕೆಯ ಕೆಲವು ಅಂಶಗಳು ಜೋಶಿಯವರಲ್ಲೂ ಇದೆಯೆನಿಸುತ್ತದೆ. ಯಾವುದು ದೀರ್ಘಕಾಲ ಉಳಿಯುವ ಮಾದರಿಯೋ (ಅಥವಾ ಹಾಗೆಂದು ತೋರಿಯೋ) ಜೋಶಿ ಇಂತಹ ದಾರಿಯನ್ನು ಆರಿಸಿಕೊಂಡರೇ?

ಇತಿಹಾಸದ ಸಂದರ್ಭಗಳನ್ನು ಹೀಗೆಯೇ ಎಂದು ತೀರ್ಮಾನಿಸುವುದು ಕಷ್ಟ. ಆದರೆ ಇಂತಹ ಊಹೆಗೆ ಆಧಾರಗಳು ಜೋಶಿಯವರ ಅರ್ಥಗಾರಿಕೆಯಲ್ಲಿ ಸಿಗುತ್ತವೆ. ಹಾಗೆಂದು ಬುದ್ಧಿಪೂರ್ವಕ ಅವರು ಮಾಡಿದಂತೆಯೂ ಇಲ್ಲ. ಎಲ್ಲೋ ಕಲ್ಲಿನ ಸಂದಿನಲ್ಲಿ ಬಿದ್ದ ಬೀಜವಾದರೂ ಮೊಳಕೆಯೊಡೆದು ಬೆಳಕಿನತ್ತ ಚಿಗುರುವ ಪ್ರಕೃತಿಯಂತೆ ಇದೂ ಸಂಭವಿಸಿರಬೇಕು. ಹೇಗಾದರೂ ಕಾಣಿಸಿಕೊಳ್ಳಲೇಬೇಕೆಂಬುದು ಅರ್ಥಗಾರಿಕೆಯ ಅನಿವಾರ್ಯವಷ್ಟೆ?

ಆದರೆ ಒಂದೆರಡು ಅಂಶಗಳನ್ನು ಮಾತ್ರ ಜೋಶಿ ಹಠಹಿಡಿದು ಅಳವಡಿಸಿಕೊಂಡಂತೆ ತೋರುತ್ತದೆ. ಅವುಗಳಲ್ಲಿ ಶ್ರುತಿ ಬದ್ಧತೆಯನ್ನು ಬಿಟ್ಟು ಅರ್ಥ ಹೇಳವುದು ಅಥವಾ ಒತ್ತಾಯದಿಂದ ಅಳವಡಿಸಿಕೊಳ್ಳದಿರುವುದು. (ಇದಕ್ಕೊಂದು ಹಿನ್ನೆಲೆಯಿದೆ. ಎಂಬತ್ತರ ದಶಕದ ಕೊನೆಗೆ ಉದಯವಾಣಿ ಪತ್ರಿಕೆಯಲ್ಲಿ ಅರ್ಥಗಾರಿಕೆ ಮತ್ತು ಶ್ರುತಿಯ ಕುರಿತು ವಿದ್ವತ್ತೂರ್ಣ ಚರ್ಚೆ ನಡೆಯಿತು. ಸಂಗೀತ ಅಥವಾ ಹರಿಕಥೆಯ ಮಾದರ ಶ್ರುತಿಲೀನತೆ ಅನಗತ್ಯ ಅಂತ ಜೋಶಿಯವರ ನಿಲುವಾಗಿತ್ತು. ಅದರ ಪರಿಣಾಮ ಮಂಗಳೂರಿನಲ್ಲಿ ಒಂದು ವಿಚಾರ ಗೋಷ್ಠಿಯೂ ನಡೆಯಿತು. ಆ ಗೋಷ್ಠಿಯ ಮೊದಲು 'ಜೋಶಿಯವರಿಗೆ ಶ್ರುತಿಯಲ್ಲಿ ಅರ್ಥಹೇಳಲು ಬರುವುದಿಲ್ಲ ಅನ್ನುವ ಟೀಕೆಗಳೂ ಕೇಳಿಬಂದವು. ಉತ್ತರವಾಗಿ ಜೋಶಿಯವರು ಶ್ರುತಿ ಬದ್ಧವಾಗಿ ಅರ್ಥ ಹೇಳಿ ಇದಲ್ಲವೇ ನಿಮ್ಮ ನಿರೀಕ್ಷೆ?' ಅಂತ ಕೇಳಿದರು) ಇಲ್ಲಿ ಇದರ ಉಲ್ಲೇಖ ಮಾಡಿದ ಉದ್ದೇಶ ಜೋಶಿ ಬುದ್ಧಿಪೂರ್ವಕ ಈ ಶೈಲಿಯನ್ನು ಅಳವಡಿಸಿಕೊಂಡರು ಅನ್ನುವುದರ ಸಮರ್ಥನೆಗೆ ಮಾತ್ರ.

ಇನ್ನೊಂದು ಸಂಕ್ಷಿಪ್ತವಾದ ಅವರ ಅಭಿವ್ಯಕ್ತಿ ವಿಧಾನ ರೂಪುಗೊಳ್ಳುವುದಕ್ಕೆ ಹಿನ್ನೆಲೆಯಾಗಿ ಗಮನೀಯ. ಆ ಕಾಲದಲ್ಲಿ ಇಡಿ ಇರುಳಿಗೆ ಎರಡು ಪ್ರಸಂಗಗಳನ್ನು ಇಟ್ಟುಕೊಳ್ಳುವುದು ಸಾಮಾನ್ಯವಾಗಿತ್ತು. ಮೊದಲ ಪ್ರಸಂಗದಲ್ಲಿ ಶೇಣಿಯಂತಹ ಹಿರಿಯರಿದ್ದರೆ ಅದು ಲಂಬಿಸಿ ಎರಡನೆಯ ಪ್ರಸಂಗಕ್ಕೆ ಅವಧಿ ಮೊಟಕಾಗುತ್ತಿತ್ತು. ಅಥವಾ ಎರಡನೆಯದಕ್ಕೆ ಅವರಿದ್ದರೆ ಮೊದಲ ಪ್ರಸಂಗ ಮೊಟಕಾಗುವ ಅನಿವಾರ್ಯವಿತ್ತು.

ವಾಗರ್ಥ ಗೌರವ / 23