ಪ್ರಭಾಕರ ಜೋಶಿ – ನಮ್ಮ ನಡುವಿನ ಧೀಮಂತ
ಪ್ರೊ. ಎಂ.ಎ. ಹೆಗಡೆ
ಡಾ. ಎಂ. ಪ್ರಭಾಕರ ಜೋಶಿಯವರಿಗೂ ನನಗೂ ಸುಮಾರು ಐವತ್ತು ವರ್ಷಗಳ ಸ್ನೇಹ. ಕಾಲೇಜಿನ ದಿನಗಳಲ್ಲಿ ಅಂಕುರಿಸಿ, ವಿಶ್ವವಿದ್ಯಾಲಯದಲ್ಲಿ ಪಲ್ಲವಿಸಿ ವರ್ಧಿಸುತ್ತ ಹೆಮ್ಮರವಾಗಿ ಶಾಖೋಪ ಶಾಖೆಗಳಲ್ಲಿ ವಿಸ್ತಾರಗೊಳ್ಳುತ್ತ ನಡೆದಿರುವುದು ನನಗೊಂದು ಹೆಮ್ಮೆ. ಅಂಥವರೊಬ್ಬರ ಸ್ನೇಹ ದೊರಕುವುದು ಪುಣ್ಯವಿಶೇಷ. ಪ್ರಥಮ ನೋಟದಲ್ಲಿಯೇ ಅವರಿಂದ ಆಕರ್ಷಿತನಾಗಿದ್ದೆ. ಅಂಥ ಆಕರ್ಷಣೆಗಳು ಶಾಶ್ವತವಾಗಿರುವುದು ಅಪರೂಪ. ದಿನಗಳೆದಂತೆ ಹಳಸಲಾರಂಭಿಸುತ್ತದೆ. ಒಂದು ದಿನ ಕೊಳೆತೋ ಕಳಿತೋ ಹೋಗ ಬಹುದು. ಹಾಗಾಗದೆ ಉಳಿದುಕೊಂಡ ಸ್ನೇಹಕ್ಕೆ ಸ್ನೇಹವೆಂಬ ಹೆಸರು ಸಲ್ಲುತ್ತದೆ. ಅದಿಲ್ಲವಾದರೆ ಅದು ಬರಿಯ ಜಿಡ್ಡು; ತೊಳೆದರೆ ಹೊರಟುಹೋಗುತ್ತದೆ. ನನ್ನ ಮತ್ತು ಜೋಶಿಯವರ ಸ್ನೇಹ ಸುದೀರ್ಘ ಕಾಲದಿಂದ ತಾಳಿಕೆ ಬಂದು ಮಾರ್ಜಕಗಳ ಹಿಡಿತಕ್ಕೆ ಸಿಗಲಾರದಂಥದು. ನನಗಂತೂ ಅವರ ಸೆಳೆತದಿಂದ ತಪ್ಪಿಸಿಕೊಳ್ಳುವ ಬಯಕೆಯಿಲ್ಲ. ಪ್ರಿಯಬಂಧನವು ವಿಮೋಚನೆಯನ್ನು ಸ್ವಾಗತಿಸುವುದಿಲ್ಲ.
ಯಕ್ಷಗಾನ ನಮ್ಮನ್ನು ಬೆಸೆದ ಕೊಂಡಿಗಳಲ್ಲಿ ಪ್ರಮುಖವಾದುದು. ನಮ್ಮ ಪರಿಚಯದ ಆರಂಭವು ಅಲ್ಲಿಯೇ, ನಾನೂ ಅರ್ಥಗಾರಿಕೆಯಲ್ಲಿ ತೊಡಗಿಕೊಂಡವನು. ನಾನು ಏಣಿಯ ಬುಡದಲ್ಲಿದ್ದರೆ ಅವರು ತುದಿಯಲ್ಲಿದ್ದಾರೆಂಬುದು ಬೇರೆ ಮಾತು. ನಾನು