ಈ ಪುಟವನ್ನು ಪ್ರಕಟಿಸಲಾಗಿದೆ

ಅವರ ಜೊತೆಯಲ್ಲಿ ಯಾರೂ ಅರ್ಥ ಹೇಳಬಹುದು. ಎದುರಾಳಿಯನ್ನು ಧೃತಿಗೆಡಿಸುವ, ತೇಜೋವಧೆಯನ್ನು ಮಾಡುವ ಪ್ರವೃತ್ತಿಯಿಂದ ದೂರ. ಎದುರಿನವರನ್ನು ಪ್ರೋತ್ಸಾಹಿಸಿ ಅವರಲ್ಲಿರುವ ಒಳಿತನ್ನು ಹೊರತರಲು ಸಹಕರಿಸುತ್ತಾರೆ. ಅವರ ಸಹೃದಯತೆಯನ್ನು ದುರುಪಯೋಗಪಡಿಸಿಕೊಳ್ಳಲು ಹೊರಟವರಿಗೆ ಶಾಸ್ತಿಯನ್ನು ಮಾಡಲೂ ಅವರು ಸಿದ್ಧ. ತಾವಾಗಿ ಮೈಮೇಲೆ ಬೀಳುವುದಿಲ್ಲ. ತಾವಾಗಿ ಬಂದು ಬಿದ್ದವರನ್ನು ಕೊಡಹಿ ಹಾಕುತ್ತಾರೆ. ಅದು ಅನಿವಾರ್ಯ ಕೂಡ.

ಜೋಶಿಯವರಲ್ಲಿ ಕವಿಹೃದಯದೊಂದಿಗೆ ದಾರ್ಶನಿಕನ ಬೌದ್ಧಿಕತೆಯೂ ಸೇರಿರುವುದು ಉಲ್ಲೇಖನೀಯ. ಯಕ್ಷಗಾನದಂಥ ಕಲೆಯ ರಸವನ್ನು ಸವಿಯಬಲ್ಲವ ರಾಗಿದ್ದು ಗಂಭೀರವಾದ ತತ್ವಚಿಂತನೆಯಲ್ಲಿ ತೊಡಗಿಕೊಂಡವರು ಅವರು. ಅವರು ಓದಿದ್ದು ವಾಣಿಜ್ಯಶಾಸ್ತ್ರವನ್ನು; ವಿದ್ಯಾರ್ಥಿಗಳಿಗೆ ಅದನ್ನೇ ಪಾಠ ಮಾಡಿದವರು. ಆದರೆ ಅವರ ಪ್ರಮುಖವಾದ ಆಸಕ್ತಿ ಭಾರತೀಯ ತತ್ವಶಾಸ್ತ್ರದಲ್ಲಿ, ಈ ಶಾಸ್ತ್ರದ ಮೂಲಗ್ರಂಥಗಳೆಲ್ಲ ಸಂಸ್ಕೃತದಲ್ಲಿವೆ. ಆದರೆ ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಅವುಗಳ ಚಿಂತನೆಗಳನ್ನು ತಿಳಿಯಲು ಅವಕಾಶವಿದೆ. ಆದರೆ ಅದಕ್ಕೆ ತುಂಬ ತಾಳ್ಮೆಯ ಅಧ್ಯಯನ ಬೇಕಾಗುತ್ತದೆ. ಜೋಶಿ ಅದನ್ನು ಸಾಧಿಸಿದ್ದಾರೆ.

ನಾನು ವಿದ್ಯಾರ್ಥಿಗಳ ಸಲುವಾಗಿ 'ಬ್ರಹ್ಮಸೂತ್ರ ಚತುಃಸೂತ್ರೀ' ಎಂಬ ಪುಸ್ತಕ ಬರೆದೆ. ಬ್ರಹ್ಮಸೂತ್ರಗಳ ಆರಂಭದ ನಾಲ್ಕು ಸೂತ್ರಗಳಿಗೆ ಶಂಕರಾಚಾರ್ಯರು ಬರೆದ ಭಾಷ್ಯದ ಅನುವಾದ ಮತ್ತು ವಿಸ್ತತ ಟಿಪ್ಪಣಿಗಳಿಂದ ಕೂಡಿದ ಗ್ರಂಥ ಅದು. ಸಂಸ್ಕೃತವನ್ನು ಪ್ರಧಾನವಿಷಯವನ್ನಾಗಿ ಆಯ್ದುಕೊಂಡವರಿಗೆ ಅದು ಪಠ್ಯವಾಗಿತ್ತು. ಅದನ್ನು ಸಾರ್ವಜನಿಕರ ಎದುರು ನಾನಂತೂ ತಂದವನಲ್ಲ. ಜೋಶಿಯವರಿಗೆ ಆ ಪುಸ್ತಕ ಎಲ್ಲಿ ಸಿಕ್ಕಿತೊ ತಿಳಿಯದು. ಒಂದುದಿನ ನಾನು ಸಿಕ್ಕಾಗ ಅದರ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜೊತೆಗೆ ನಾನು ಸುಮ್ಮನಿರುವುದಕ್ಕೆ ಆಕ್ಷೇಪಿಸಿದರು. ಅವರ ಒತ್ತಾಯಕ್ಕೆ ಮಣಿದು

ಬರೆಯಲು ಸಿದ್ಧನಾದೆ. ನಾವಿಬ್ಬರೂ ಸೇರಿ ತತ್ವಾರ್ಥಪದಕೋಶವನ್ನು ಬರೆಯುವ ಯೋಜನೆ ಸಿದ್ಧವಾಯಿತು. ಪದಗಳನ್ನು ಸಂಗ್ರಹಿಸಿಕೊಡುವ ಕೆಲಸ ಅವರದು;ವಿವರಿಸುವ ಕೆಲಸ ನನ್ನದು ಎಂದಾಯಿತು. ನಾನು ಬರೆದು ಅವರಿಗೆ ಅಂಚೆಯಲ್ಲಿ ಕಳಿಸುವುದು ಅವರು ಅದನ್ನು ಓದಿ ಕುಂದು ಕೊರತೆಗಳನ್ನು ಸೂಚಿಸುವುದು ಹೀಗೆ ಕೆಲಸ ಸಾಗುತ್ತಿತ್ತು. ಅಷ್ಟುಹೊತ್ತಿಗೆ ಉದಯವಾಣಿಯಲ್ಲಿ ಭಾರತೀಯ ದರ್ಶನಗಳ ಕುರಿತು ಲೇಖನಮಾಲೆಯೊಂದನ್ನು ಬರೆಯುವ ಪ್ರಸ್ತಾಪ ಬಂತು. ಆಗ ಈಶ್ವರಯ್ಯನವರು ಸಂಪಾದಕರಾಗಿದ್ದರು. ಅವರು ಕೇಳಿದ್ದಾರೆ. ಬರೆಯೋಣವೆ? ಎಂದು ನನ್ನನ್ನು ಕೇಳಿದಾಗ ನಾನು ಒಪ್ಪಿಗೆ ಸೂಚಿಸಿದೆ. ಆ ಲೇಖನ ಮಾಲೆಯು ಸಾಕಷ್ಟು ಪ್ರಶಂಸೆಯನ್ನು ಪಡೆಯಿತು. ಅನಂತರ ಅದು ದಿಗಂತ ಪ್ರಕಾಶನದಿಂದ ಪುಸ್ತಕರೂಪದಲ್ಲಿ ಪ್ರಕಟವಾಯಿತು. ಅಲ್ಲಿಯೂ ಮುಖ್ಯಪಾತ್ರ ಜೋಶಿಯವರದೇ. ನಂತರ ಭಾರತೀಯ ತತ್ವಶಾಸ್ತ್ರ ಪ್ರವೇಶ ಎಂಬ ಹೆಸರಿನಲ್ಲಿ ಹೆಗ್ಗೋಡಿನ ಅಕ್ಷರ ಪ್ರಕಾಶನದಿಂದ ಎರಡು ಮುದ್ರಣಗಳನ್ನು ಕಂಡಿದೆ.

ವಾಗರ್ಥ ಗೌರವ / 28