ಈ ಪುಟವನ್ನು ಪರಿಶೀಲಿಸಲಾಗಿದೆ

೧೫೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೪೦. ವಿಶ್ರವಾ < ರಾವಣ

ಉತ್ತರಕಾಂಡ/೧೧

ರಾವಣ-ಮಂಡೋದರಿಯ ವಿವಾಹದ ವಿಷಯವನ್ನು ಅಗಸ್ತ್ಯಮುನಿಯು ರಾಮನಿಗೆ ಹೇಳುತ್ತಾಣೆ:
ತನ್ನ ಮಂತ್ರಿಯಾದ ಪ್ರಹಸ್ತನನ್ನು ರಾವಣನು, ಕುಬೇರನ ಬಳಿಗೆ ಕಳುಹಿಸಿ ಲಂಕಾಪಟ್ಟಣದ ಬೇಡಿಕೆಯನ್ನು ಮುಂದಿಟ್ಟನು. ಆಗ ಕುಬೇರನು ತನ್ನ ಪಿತನಾದ 'ವಿಶ್ರವಾ'ನ ಸಲಹೆಯನ್ನು ಕೇಳಿದಾಗ, ಆತನು ಲಂಕೆಯನ್ನು ರಾವಣನಿಗೆ ಅರ್ಪಿಸಿ, ಕುಬೇರನು ಕೈಲಾಸ ಪರ್ವತದಲ್ಲಿ ವಾಸವಿರಬೇಕೆಂದು ಹೇಳಿದನು. ಇಷ್ಟೇ ಅಲ್ಲದೆ, ಈ ಪೂರ್ವದಲ್ಲಿಯೂ ರಾವಣನು ತನ್ನ ಬಳಿಯಲ್ಲಿಯೂ ಲಂಕಾ ಪಟ್ಟಣವನ್ನು ಬೇಡಿದ್ದನೆಂದು ಹೇಳಿದನು. 'ಲಂಕೆಯ ಬಗ್ಗೆ ಇಷ್ಟೊಂದು ಅಭಿಲಾಷೆಯನ್ನಿಟ್ಟು ಕೊಂಡರೆ ಅದು ನಿನ್ನ ನಾಶಕ್ಕೆ ಕಾರಣವಾಗುತ್ತದೆ' ಎಂದು ವಿಶ್ರವನು ರಾವಣನಿಗೆ ಸ್ಪಷ್ಟವಾಗಿ ಹೇಳಿದ್ದನು. ವರಪ್ರಾಪ್ತಿಯಿಂದ ಉನ್ಮತ್ತನಾದ ರಾವಣನು ವಿಶ್ರವನ ಉಪದೇಶವನ್ನು ಕಡೆಗಾಣಿಸಿದನು. ವಿಶ್ರವನು ಈ ರೀತಿ ಹೇಳುತ್ತಾನೆ:


            ನ ವೇತ್ತಿ ಮಮ ಶಾಪಾಚ್ಚ ಪ್ರಕೃತಿಂ ದಾರುಣಾಂ ಗತಃ ‖೪೦‖


"ನನ್ನ ಶಾಪದಿಂದ ಆತನ ಸ್ವಭಾವವು ಕ್ರೂರವಾಗಿದೆ."

ಉತ್ತರಕಾಂಡ/೧೨

ರಾವಣನು ಬೇಟೆಯಾಡಲು ಒಂದು ಜನರಹಿತ ಕಾನನದಲ್ಲಿ ಅಲೆಯುತ್ತಿದ್ದಾಗ, ತನ್ನ ಕನ್ಯೆಯೊಡನಿದ್ದ ಮಯನೆಂಬ ದೈತ್ಯನನ್ನು ಕಂಡನು. ಏಕಾಕಿಯಾಗಿದ್ದ ಮಯನನ್ನು ಸಂಧಿಸಿ ರಾವಣನು ಆತನ ಕುಲವನ್ನು ಕೇಳಿದನು. ಆಗ ಮಯನು ಈ ರೀತಿಯಿಂದ ಉತ್ತರಿಸಿದನು: "ದೇವತೆಗಳು ನನಗೆ 'ಹೇಮಾ' ಎಂಬ ಅಪ್ಸರೆಯನ್ನು ಕೊಟ್ಟರು. ಅವಳಲ್ಲಿ ನಾನು ಸಹಸ್ರಾರು ವರ್ಷಗಳ ಕಾಲ ನಿರತನಾಗಿದ್ದೆ; ಒಮ್ಮೆ ಆಕೆಯು ದೇವತಾಕಾರ್ಯಕ್ಕೆಂದು ದೇವಲೋಕಕ್ಕೆ ಹೋದವಳು ಹದಿಮೂರು ವರ್ಷಗಳು ಕಳೆದರೂ ಮರಳಿ ಬರಲಿಲ್ಲ. ಅವಳಿಂದ ಹುಟ್ಟಿದ ಈ ಕನ್ಯೆಯು ಈಗ ವಿವಾಹಯೋಗ್ಯವಾಗಿದ್ದಾಳೆ. ಹೇಮಾ ಇವಳ ವಿರಹದಿಂದ ವ್ಯಾಕುಲಗೊಂಡ ನಾನು ವರಸಂಶೋಧನೆಗಾಗಿ ಅಲ್ಲಲ್ಲಿ ಸುತ್ತುತ್ತ ಸಾಂಪ್ರತ ಇಲ್ಲಿಗೆ ಬಂದಿದ್ದೇನೆ" ಇಷ್ಟೊಂದು ನುಡಿದು ಮಯನು ರಾವಣನಿಗೆ ಆತನ ಮಾಹಿತಿಯನ್ನು ಹೇಳಲು ವಿನಂತಿಸಿದನು.