ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೬೯


ಕುಸುಮಗಳಿಂದ ಆಕೆಯು ತನ್ನ ಕೇಶರಾಸಿಯನ್ನು ಶೃಂಗರಿಸಿಕೊಂಡಿದ್ದಳು. ದಿವ್ಯರತಿಸುಖದ ಉಪಭೋಗವನ್ನು ಪಡೆಯಲು ಅವಳು ಹೊರಟಿದ್ದಳು. ನೀಲವರ್ಣದ ಉಡುಪಿನಿಂದ ಪರಮಸುಂದರಿಯಾಗಿ ಕಾಣುತ್ತಿದ್ದಳು. ಮನ್ಮಥನ ಶರಗಳಿಂದ ಪೀಡಿತನಾದ ರಾವಣನು ಆಕೆಯ ಕೈಹಿಡಿದು, "ಎಲೈ ಸುಂದರೀ, ಎಲ್ಲಿಗೆ ಹೊರಟಿರುವೆ? ಯಾರ ಬಳಿ ಹೋಗಲಿರುವೆ?" ಎಂದು ಕೇಳಿ ಅವಳಿಂದ ರತಿಸುಖವನ್ನು ಬಯಸಿದನು.
ಲಜ್ಜಾಯುಕ್ತೆಯಾಗಿ ರಂಭೆಯು ಭಯಭೀತಳಾದಳು. ಅವಳು ರಾವಣನಿಗೆ ವಿನಯಪೂರ್ವಕವಾಗಿ ಈ ರೀತಿ ಎಂದಳು: "ನನ್ನೊಡನೆ ಈ ರೀತಿ ಮಾತನಾಡುವುದು ನಿಮಗೆ ಯೋಗ್ಯವಲ್ಲ. ನೀವು ನನ್ನ ಮಾವಂದಿರು; ನನ್ನನ್ನು ರಕ್ಷಿಸುವದು ನಿಮ್ಮ ಕರ್ತವ್ಯ, ಧರ್ಮದಲ್ಲಿ ಬ್ರಾಹ್ಮಣನು, ವೀರತ್ವದಲ್ಲಿ ಕ್ಷತ್ರಿಯನು, ಕ್ರೋಧದಲ್ಲಿ ಅಗ್ನಿಯು ಮತ್ತು ಕ್ಷಮೆ ತೋರುವದರಲ್ಲಿ ಪೃಥ್ವಿಗೆ ಸಮಾನ, ಕುಬೇರನ ಪುತ್ರನಾದ ನಲಕೂಬರನು ನನ್ನ ಪ್ರಿಯಕರನಾಗಿದ್ದಾನೆ. ಈ ಶೃಂಗಾರವನ್ನು ಮಾಡಿಕೊಂಡು ಸಂಕೇತದ ಪ್ರಕಾರ ನಾನು ಆತನ ಬಳಿಗೆ ಹೋಗುತ್ತಿದ್ದೇನೆ; ನನಗಾಗಿ ಆತನು ಕಾಯುತ್ತಿರುತ್ತಾನೆ; ಆದಕಾರಣ ನನ್ನನ್ನು ಕೂಡಲೇ ಹೋಗಲು ಬಿಡಿ! ನಾನು ಅವನ ಬಳಿ ಹೋಗುತ್ತೇನೆ." ಈ ಮಾತನ್ನು ಕೇಳಿ ರಾವಣನು "ನೀನು ನನ್ನ ಸೊಸೆಯೆಂದುಕೊಂಡರೂ ನೀನು ಓರ್ವ ಅಪ್ಸರೆ; ಜನಸಾಮಾನ್ಯರ ನಿಯಮಗಳು ನಿನಗೆ ಅನ್ವಯಿಸುವದಿಲ್ಲ. ಅಪ್ಸರೆಯರಿಗೆ ಪತಿ ಇರುವದಿಲ್ಲ; ದೇವತೆಗಳಿಗೆ ಒಂದೇ ಪತ್ನಿ ಇರುವದಿಲ್ಲ." ಹೀಗೆಂದು ಬಲಾತ್ಕಾರ ಮಾಡಿ ರಂಭೆಯನ್ನು ಉಪಭೋಗಿಸಿದನು. ಲಜ್ಜಾ-ಭಯಗಳಿಂದ ರಂಭೆಯು ಕಂಪಿಸುತ್ತ ನಲಕೂಬರನ ಹತ್ತಿರ ಹೋದಳು. ಅವನ ಪಾದಕ್ಕೆ ಬಿದ್ದು ನಡೆದ ವೃತ್ತಾಂತವನ್ನು ಅವನಿಗೆ ಅರುಹಿದಳು. ಅದನ್ನು ಕೇಳಿ ನಲಕೂಬರನು ಕ್ರೋಧವಿವಶನಾದನು. ಕೈಯಲ್ಲಿ ಉದಕವನ್ನು ಎತ್ತಿಕೊಂಡು ಆಚಮನ ಮಾಡಿದನು-

            ಉತ್ಸಸರ್ಜ ತದಾ ಶಾಪಂ ರಾಕ್ಷಸೇಂದ್ರಾಯ ದಾರುಣಮ್ |
            ಅಕಾಮಾ ತೇನ ಯಸ್ಮಾತ್ತ್ವಂ ಬಲಾದ್ ಭದ್ರೇ ಪ್ರಘರ್ಷಿತಾ ‖೫೪‖
            ತಸ್ಮಾತ್ಸ ಯುವತೀಮನ್ಯಾಂ ನಾಕಾಮಾನುಪಯಾಸ್ಯತಿ |
            ಯದಾ ಹ್ಯಕಾಮಾಂ ಕಾಮಾರ್ತೋ ಘರ್ಷಯಿಷ್ಯತಿ ಯೋಷಿತಾಮ್ ‖೫೫‖
            ಮೂರ್ಧಾ ತು ಸಪ್ತಧಾ ತಸ್ಯ ಶಕಲೀಭವಿತಾ ತದಾ ‖೫೬‖