ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೭೫


"ಸಹಾಯವನ್ನು ಕೋರಿ ಬಂದವರ ಕಾರ್ಯಗಳನ್ನು ಪೂರೈಸಲು ನೀನು ಹೊರಗೆ ಬರುತ್ತಿಲ್ಲ; ಹೇ ರಾಜನೆ, ನೀನು ಸಕಲಪ್ರಾಣಿಗಳಿಗೆ ಅದೃಶ್ಯನಾಗಿರುವ 'ಓತಿಕೇತ'ನಾಗುವೆ; ನೂರಾರು ಸಾವಿರಾರು ವರ್ಷಗಳವರೆಗೆ ಓತಿಕೇತನಾಗಿ ಬಿಲದಲ್ಲಿ ವಾಸಿಸುವೆ; ಈ ಜಗತ್ತಿನಲ್ಲಿ ಯಾದವರ ಕೀರ್ತಿಯನ್ನು ವರ್ಧಿಸುವ ವಿಷ್ಣುವು ಪುರುಷದೇಹವನ್ನುಧರಿಸಿ ವಾಸುದೇವನೆಂದು ಜನಿಸುವನು. ಹೇ ರಾಜನೇ, ಆತನು ನಿನ್ನನ್ನು ಈ ಶಾಪದಿಂದ ಮುಕ್ತಗೊಳಿಸುವನು; ಸಾರಾಂಶದಲ್ಲಿ, ನೀನು ಈಗ 'ಓತಿಕೇತ'ನಾಗುವೆ; ನಿನ್ನ ಪಾಪ ಪರಿಹಾರವಾಗಲು ಇಷ್ಟೊಂದು ದೀರ್ಘ ಕಾಲವು ಬೇಕಾಗುವದು."
ರಾಜನಿಗೆ ಶಾಪ ಕೊಟ್ಟು ಆ ಇಬ್ಬರು ಬ್ರಾಹ್ಮಣರು ಸ್ವಸ್ಥಚಿತ್ತರಾದರು. ಆ ಹಸು, ಸೋತು ಬಡವಾಗಿದ್ದುದರಿಂದ ಅಗ್ನಿಹೋತ್ರಿ ಬ್ರಾಹ್ಮಣನು ಆ ಇನ್ನೊಬ್ಬ ಬ್ರಾಹ್ಮಣನಿಗೆ ಆ ಹಸುವನ್ನು ಕೊಟ್ಟುಬಿಟ್ಟನು. ಇತ್ತ ರಾಜನು ಆ ಭಯಂಕರ ಶಾಪಕ್ಕೆ ಗುರಿಯಾದನು. ಅಲ್ಪ ಅಪರಾಧಕ್ಕೆ ರಾಜನಿಗೆ ಘೋರ ಶಾಪವಾಯಿತೆಂದು ಲಕ್ಷ್ಮಣನಿಗೆ ಎನಿಸಿತು.
ಬ್ರಾಹ್ಮಣರ ಉದ್ಗಾರಗಳಲ್ಲಿಯ ಉತ್ತರಾರ್ಧವು ಉಃಶಾಪದಂತಿದೆ. ಸಾಮಾನ್ಯವಾಗಿ ಉಃಶಾಪವು ಯಾಚಿತವಾಗಿರುತ್ತದೆ. ನೃಗರಾಜನು ಉಃಶಾಪವನ್ನು ಬೇಡಿರಲಿಲ್ಲವಾದರೂ ಶಾಪಮುಕ್ತಿಯ ಬಗ್ಗೆ ಬ್ರಾಹ್ಮಣರು ತಾವಾಗಿಯೇ ಹೇಳಿದ್ದಾರೆ.
ರಾಜರ ಅಪರಾಧದ ಸಂಬಂಧವಾಗಿ ನೃಗರಾಜನ ಕಥೆಯನ್ನು ಲಕ್ಷ್ಮಣನಿಗೆ ಹೇಳಿದ ನಂತರ ರಾಮನು ನಿಮಿರಾಜನ ಇನ್ನೊಂದು ಕಥೆಯನ್ನು ಹೇಳುತ್ತಾನೆ:

೫೦. ವಸಿಷ್ಠ < ನಿಮಿರಾಜ

ಉತ್ತರಕಾಂಡೆ/೫೫

'ನಿಮಿ'ಯಂ ಇಕ್ಷ್ವಾಕುವಿನ ಹನ್ನೆರಡನೆಯ ಪುತ್ರನು. ಆತನು ಶೂರನೂ, ಧರ್ಮ ಪರಾಯಣನೂ ಅಗಿದ್ದನು. ಗೌತಮ ಮುನಿಯ ಆಶ್ರಮದ ಹತ್ತಿರ ಅಮರಾವತಿಯಂತೆ ಕಂಗೊಳಿಸುವ 'ವೈಜಯಂತ' ಎಂಬ ನಗರವನ್ನು ನಿರ್ಮಿಸಿದನು. ಪಿತನ ಮನಸ್ಸಿಗೆ ಆನಂದವನ್ನುಂಟುಮಾಡಲು ದೀರ್ಘಯಾಘವನ್ನು ಮಾಡಬೇಕೆಂಬ ಇಚ್ಛೆ ಆತನಿಗಾಯಿತು. ಪಿತನ ಸಲಹೆಯಂತೆ ನಿಮಿಯಂ ಬ್ರಹ್ಮರ್ಷಿ ಶ್ರೇಷ್ಠನಾದ ವಸಿಷ್ಠನಿಗೆ ಯಜ್ಞದ ಪ್ರಥಮ ಪೌರೋಹಿತ್ಯವನ್ನು ಅರ್ಪಿಸಿದನು.