ಈ ಪುಟವನ್ನು ಪರಿಶೀಲಿಸಲಾಗಿದೆ

೧೮೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ನೀರಿನಲ್ಲಾದರೂ ಮುಳುಗುವೆ; ಇಲ್ಲವೇ ವಿಷವನ್ನು ಕುಡಿದು ಪ್ರಾಣತ್ಯಾಗವನ್ನು ಮಾಡಲಿರುವೆ! ನನಗಾಗುವ ಮಾನಹಾನಿಯನ್ನು ಸಹಿಸುವದು ನನ್ನಿಂದಾಗದು. ನನ್ನ ದುಃಖದ ಸುಳಿವೇ ನಿಮಗಿಲ್ಲ. ಆದ್ದರಿಂದ ಯಯಾತಿಯ ಸದಾವಕಾಲವೂ ನನ್ನನ್ನು ಅವಮಾನಿಸುತ್ತಾನೆ. ಯಾವ ಮರ್ಯಾದೆಯನ್ನೂ ನನಗೆ ಕೊಡುವುದಿದಲ್ಲ" ಎಂದು ಹೇಳಿದಳು. ಮಗಳ ಈ ನುಡಿಗಳನ್ನು ಕೇಳಿ ಶುಕ್ರಾಚಾರ್ಯನು ಸಿಟ್ಟಾಗಿ ಯಯಾತಿಗೆ ಈ ರೀತಿ ಶಾಪವನ್ನು ಸುರಿದನು:

            ಯಸ್ಮಾನ್ಮಾಮವಜಾನೀಷೇ ನಾಹುಷ ತ್ವಂ ದುರಾತ್ಮವಾನ್ |
            ವಯಸಾ ಜರಯಾ ಜೀರ್ಣಃ ಶೈಥಿಲ್ಯಮುಪಯಾಸ್ಯಸಿ ‖೨೩‖


"ಎಲೈ ನಹುಷಪುತ್ರನೇ, ನೀನು ನನ್ನನ್ನು ಕಡೆಗಾಣಿಸಿರುವೆಯಾದ್ದರಿಂದ ದುರಾತ್ಮನಾದ ನೀನು ಸದ್ಯ ಇಳಿವಯಸ್ಸಿನವನು, ವೃದ್ಧನು, ದುರ್ಬಲನೂ ಆಗುವೆ."
ಕ್ಷಾತ್ರಧರ್ಮವನ್ನು ಅನುಸರಿಸಿ ಯಯಾತಿಯು ಭಾರ್ಗವ-ಶುಕ್ರಾಚಾರ್ಯನ ಶಾಪವನ್ನು ತಾಳಿಕೊಂಡನು.

೫೪. ಯಯಾತಿ < ಯದು

ಉತ್ತರಕಾಂಡ/೫೯

ಭಾರ್ಗವ ಶುಕ್ರಾಚಾರ್ಯನು ಯಯಾತಿಗೆ ಶಾಪವನ್ನು ಕೊಟ್ಟ ನಂತರ ಶಾಪದ ವಾರ್ಧಕ್ಯವನ್ನು ಸ್ವೀಕರಿಸಲು ತನ್ನ ಇಬ್ಬರೂ ಪುತ್ರರಿಗೂ ಯಯಾತಿಯು ಹೇಳಿದಾಗ ಪುರುವು ಅದನ್ನು ಸ್ವೀಕರಿಸಿದನು; ಯದುವು ಅದನ್ನು ನಿರಾಕರಿಸಿದನು. ಆಗ ಯಯಾತಿಯು ಯದುವಿಗೆ ಶಾಪವನ್ನು ನುಡಿದ ವೃತ್ತಾಂತವನ್ನು ರಾಮನು ಲಕ್ಷ್ಮಣನಿಗೆ ಹೇಳುತ್ತಾನೆ:
ಯಯಾತಿಗೆ ಮುಪ್ಪು ಬಂದದ್ದರಿಂದ ಆತನು ಬಹಳ ದುಃಖಕ್ಕೊಳಗಾದನು. ತನ್ನ ವೃದ್ಧತ್ವವನ್ನು ಕೆಲಕಾಲ ಸ್ವೀಕರಿಸಲು ಮತ್ತು ತಾರುಣ್ಯವನ್ನು ಒದಗಿಸಲು ಯಯಾತಿಯು ದೇವಯಾನಿಯ ಪುತ್ರನಾದ ಯದುವಿಗೆ: "ನನ್ನ ಈ ಘೋರ ವೃದ್ಧಾಪ್ಯವನ್ನು ನೀನು ಸ್ವೀಕರಿಸು; ಅಂದರೆ ನಾನು ವಿಷಯೋಪಭೋಗಗಳಲ್ಲಿ ನಿರತನಾಗುವೆ. ನನ್ನ ವಿಷಯಲಾಲಸೆ ಇನ್ನೂ ತೃಪ್ತಿಗೊಂಡಿಲ್ಲ. ರತಿಕ್ರೀಡೆಯನ್ನು ಇನ್ನೂ ಕೆಲವು ಕಾಲ ಅನುಭವಿಸಿ, ನಾನು ನನ್ನ ಮುಪ್ಪನ್ನು ಮರಳಿ ನಿನ್ನಿಂದ ಸ್ವೀಕರಿಸುವೆ" ಎಂದನು. ತಂದೆಯ ಮಾತನ್ನು ಕೇಳಿ ಯದುವು "ನೀವು ನನಗೆ