ಈ ಪುಟವನ್ನು ಪ್ರಕಟಿಸಲಾಗಿದೆ

೨೪೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೫. ವಿಷ್ಣು < ದೇವತೆಗಳು

ಬಾಲಕಾಂಡ/೧೫

ಋಷ್ಯಶೃಂಗ ಮುನಿಯು, ದಶರಥರಾಜನ ಪುತ್ರಕಾಮೇಷ್ಟಿ ಯಜ್ಞದ ಅರ್ತ್ವಿಜ
ನಾಗಿದ್ದನು. ಆತನು ಪುತ್ರಪ್ರಾಪ್ತಿಗೆ ಸಾಧನಕಾರಕವಾದ ಇಷ್ಟಿಯನ್ನು ಪ್ರಾರಂಭಿಸಿದಾಗ
ದೇವ, ಸಿದ್ದ, ಮಹರ್ಷಿ ಇವರೆಲ್ಲರೂ ಪ್ರತಿಗ್ರಹವನ್ನು ಮಾಡಲು ತಮ್ಮ ಆಂತರಿಕ
ಶಕ್ತಿಯಿಂದ ಯಾರ ದೃಷ್ಟಿಗೂ ಬೀಳದಂತೆ ಯಜ್ಞಮಂಟಪದಲ್ಲಿ ಬಂದು ಸೇರಿದರು.
ಅವರು ಬ್ರಹ್ಮದೇವನಿಗೆ “ಹೇ ಭಗವನ್, ತಮ್ಮ ಪ್ರಸಾದದಿಂದ ರಾವಣನೆಂಬ
ರಾಕ್ಷಸನು ಮದೋನ್ಮತ್ತನಾಗಿ ತನ್ನ ಬಲದಿಂದ ನಮ್ಮೆಲ್ಲರನ್ನೂ ಪೀಡಿಸುತ್ತಿದ್ದಾನೆ.
ಅವನಿಗೆ ಶಿಕ್ಷಿಸುವುದು ನಮ್ಮಿಂದಾಗದು; ನೀವು ಪ್ರಸನ್ನರಾಗಿ ಆತನಿಗೆ ವರ
ಕೊಟ್ಟ ಕಾಲದಿಂದ, ನಿಮ್ಮ ವಚನವನ್ನು ಗೌರವಿಸಲು ನಾವೆಲ್ಲರೂ ಎಲ್ಲ ಕಾಟವನ್ನೂ
ಸಹಿಸುತ್ತಿದ್ದೇವೆ. ದುರ್ಮತಿಯಾದ ರಾವಣನು ತ್ರೈಲೋಕವನ್ನು ಪೀಡಿಸುತ್ತಿದ್ದು,
ಸ್ವರ್ಗಾಧಿಪತಿಯಾದ ಇಂದ್ರನನ್ನು ಜಯಿಸುವ ಇಚ್ಛೆಯನ್ನಿಟ್ಟುಕೊಂಡಿದ್ದಾನೆ. ನಿಮ್ಮ
ವರದಾನದಿಂದ ಅವನಿಗೆ ಯಾವ ಮಿತಿಮೇರೆಗಳೂ ಉಳಿದಿಲ್ಲ. ಹೀಗಾಗಿರು
ವುದರಿಂದ ನೀವು ಅತನನ್ನು ವಧಿಸುವ ಉಪಾಯವನ್ನು ಯೋಚಿಸಬೇಕು!”
ದೇವತೆಗಳ ವಿನಂತಿಯನ್ನು ಕೇಳಿ ಯೋಚನೆಯಲ್ಲಿ ತೊಡಗಿದ ಬ್ರಹ್ಮದೇವನಿಗೆ,
ರಾವಣನನ್ನು ವಧಿಸುವ ಒಂದು ಉಪಾಯವು ಹೊಳೆಯಿತು. ವರವನ್ನು
ಬೇಡುವಾಗ ರಾವಣನು ಗಂಧರ್ವ, ಯಕ್ಷ, ರಾಕ್ಷಸ, ದೇವತೆಗಳಿಂದ ತನ್ನ ವಧೆ
ಸಾಧ್ಯವಾಗಬಾರದೆಂದು ಬೇಡಿಕೊಂಡಿದ್ದನು. ಅದರಲ್ಲಿ ಮನುಷ್ಯರ ಉಲ್ಲೇಖ
ವಿರಲಿಲ್ಲ; ಏಕೆಂದರೆ ರಾವಣನಿಗೆ ಮನುಷ್ಯರ ಭಯ-ಪರಿವೆ ಕಿಂಚಿತ್ತೂ ಇರಲಿಲ್ಲ.
ಅವನ ವಧೆಯು ಮನುಷ್ಯರಿಂದ ಸಾಧ್ಯ! ಎಂಬುದು ಬ್ರಹ್ಮದೇವನ ಗಮನಕ್ಕೆ
ಬಂದಿತು. ಆಗ ದೇವತೆಗಳೆಲ್ಲರೂ ಸೇರಿ ವಿಷ್ಣುವನ್ನು ಈ ರೀತಿ ವಿನಂತಿಸಿದರು-
“ಹೇ ವಿಷ್ಟೋ, ಲೋಕಹಿತಕ್ಕಾಗಿ, ನಾವು ನಿಮ್ಮನ್ನು ಒಂದು ಕಾರ್ಯಾರ್ಥ
ಯೋಜಿಸಬೇಕೆಂದಿದ್ದೇವೆ. ದಶರಥ ರಾಜನ ಮೂರು ಮಡದಿಯರಲ್ಲಿ, ನೀವು
ಸ್ವಂತದ ನಾಲ್ಕು ಅಂಶಗಳ ರೂಪದಲ್ಲಿ ಅವನ ಪುತ್ರರೆಂದು ಅವತರಿಸಬೇಕು;
ಮತ್ತು ದೇವತೆಗಳಿಂದಲೂ ಮರಣವಿರದ ಮದೋನ್ಮತ್ತ ರಾವಣನನ್ನು ನೀವು
ಸಂಹರಿಸಬೇಕು! ನಮ್ಮೆಲ್ಲರಿಗೂ ನೀವೇ ಆಧಾರಭೂತರು. ದೇವತೆಗಳ ಶತ್ರುವನ್ನು
ಕೊಲ್ಲಲು ಮಾನವಲೋಕದಲ್ಲಿ ಅವತರಿಸುವ ಮನಸ್ಸು ಮಾಡಬೇಕು! ದೇವತೆಗಳ
ವಿನಂತಿಯನ್ನು ಕೇಳಿ ವಿಷ್ಣುವು ಹೀಗೆ ನುಡಿದನು-