ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೧೧

ದೊಡ್ಡ ಕ್ರಾಂತಿ ನಡೆಯಿತು. ಅಗ್ನಿಗೆ ದೇವತ್ವ ದೊರೆಯಿತು. ಅಗ್ನಿಯನ್ನು ಸಂತುಷ್ಟ ಗೊಳಿಸಲು ಹಲವಾರು ಉಪಾಸನೆಗಳು ರೂಢವಾದವು. 'ಅಗ್ನಿಯು ಪ್ರಸನ್ನನಾದರೆ ಕೋರಿಕೆ ಪೂರ್ಣವಾಗುತ್ತದೆ' ಎಂಬ ನಂಬಿಕೆ ದೃಢವಾದಂತೆ 'ಅಗ್ನಿಯ ಕೋಪವು ಸರ್ವನಾಶಕ್ಕೆ ಕಾರಣ' ಎಂಬ ಭಯವೂ ಹುಟ್ಟಿಕೊಂಡಿತು. ಯಜ್ಞವಿಧಿಯು ಇಷ್ಟದೇವತೆಗಳನ್ನು ಸಂತುಷ್ಟಗೊಳಿಸುವ ಮಾಧ್ಯಮವಾಯಿತು. ಯಜ್ಞದಲ್ಲಿ ಕೊಟ್ಟ ಆಹುತಿಯನ್ನು ಅಗ್ನಿಯು ಇಷ್ಟದೇವತೆಗಳಿಗೆ ತಲುಪಿಸುತ್ತಾನೆ; ಅದರಿಂದ ಇಷ್ಟಾರ್ಥ ಪೂರ್ತಿಗೊಳ್ಳುತ್ತದೆ ಎಂಬ ಮನೋಭಾವವು ಬೆಳೆದುಬಂದಿತು. ಈ ಕ್ರಿಯೆಯಲ್ಲಿ ಕೇವಲ ಕೊಡುವ- ತೆಗೆದುಕೊಳ್ಳುವ ಭಾವನೆ ಇರದೇ ಈ ಯಾತುವಿಧಿಯ ಕರ್ಮದಲ್ಲಿ ದೇವರ ಅಂತಸ್ತನ್ನು ಹೆಚ್ಚಿಸುವ ಭಾಗವಿತ್ತು.
ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ |
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ॥

ಭ. ಗೀತಾ ೩/೧೧


ಭಾವಯತ್ ಎಂದರೆ ಶಕ್ತಿಯುತನಾಗಿ ಮಾಡುವುದು. ಋಗ್ವೇದದಲ್ಲಿ ಆಗಾಗ ಕಂಡುಬರುವ ಕೊಡುವ-ತೆಗೆದುಕೊಳ್ಳುವ ಭಾವನೆಯಲ್ಲಿ ಶಕ್ತಿಯುಕ್ತನಾಗುವ ಕಲ್ಪನೆ ಇದೆ. ಆಹುತಿಗಳನ್ನರ್ಪಿಸಿ ದೇವತೆಯನ್ನು ಸಂತೋಷಗೊಳಿಸಿದರೆ ಧ್ಯೇಯ ಸಾಧನೆ ನಿಶ್ಚಿತ ಎಂದು ಭಾವಿಸಿದ ತ್ರಿಶಂಕು, ದೇಹಸಹಿತವಾಗಿ ಸ್ವರ್ಗವನ್ನು ಸೇರುವ ಅತಿ ಅಭಿಲಾಷೆಯನ್ನು ಇಟ್ಟುಕೊಂಡಿದ್ದನು. ಅದಕ್ಕಾಗಿ ಒಂದು ಮಹಾಯಾಗವನ್ನು ಪ್ರಾರಂಭಿಸಿದನು.
ಕರ್ತವ್ಯಬುದ್ಧಿಯಿಂದ ಪ್ರೇರಿತನಾಗಿ ಆಚರಿಸಿದ, ಫಲದ ಆಸೆಯನ್ನು ಹೊಂದಿರದ ಕರ್ಮಕ್ಕೆ ಭಗವದ್ಗೀಎಯಲ್ಲಿ ಯಜ್ಞವೆಂದಿದ್ದಾರೆ. ಯಜ್ಞವೆಂದರೆ ಪೂಜ್ಯವ್ಯಕ್ತಿಗಾಗಿ ಮಾಡಬೇಕಾದ ತ್ಯಾಗ. ಧರ್ಮವು ಇದರೊಂದಿಗೆ ಸಂಬಂಧಿತವಾಗಿದೆ. ಯಜ್ಞ ಕರ್ಮದಲ್ಲಿ ಪರಮೇಶ್ವರನ ಅಧಿಷ್ಠಾನ ಅಗತ್ಯವಿದೆ. ಆತನ ಕೃಪೆಯಿಂದಲೇ ಸೃಷ್ಟಿಚಕ್ರವು ಸಾಗಿದೆ:
ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ |
ಯಜ್ಞಾದ್ಭವತಿ ಫರ್ಜನ್ಯೋ ಯಜ್ಞಃ ಕರ್ಮಸಮುದ್ಭವಂ॥೧೪॥
ಕರ್ಮ ಬ್ರಹೋದ್ಭವಂ ವಿದ್ಭಿ ಬ್ರಹ್ಮಾಕ್ಷರಸಮುದ್ಭವಂ |
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್॥೧೫॥

ಭ.ಗೀ. ೩