ಈ ಪುಟವನ್ನು ಪ್ರಕಟಿಸಲಾಗಿದೆ

೩೩೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


“ಹೀಗಿದ್ದರೆ, ಇಂದ್ರನನ್ನು ಬಿಡುಗಡೆ ಮಾಡಲು ನಾನು ಕೇಳುವ ಬೇರೆ
ವರವೆಂದರೆ, ಶತ್ರುಗಳ ಪರಾಭವವನ್ನು ಬಯಸುವ ನಾನು, ಮಂತ್ರಸಿದ್ಧ ಹವನ
ದ್ರವ್ಯಗಳಿಂದ ನಿತ್ಯವೂ ನಡೆಸುವ ಅಗ್ನಿಪೂಜಾಕರ್ಮವನ್ನು ಪೂರೈಸಿ ಸಂಗ್ರಾಮಕ್ಕೆ
ತೆರಳುವದು ಇಷ್ಟ; ಇದಕ್ಕಾಗಿ ಸಂಗ್ರಾಮಕ್ಕೆ ಹೊರಡಲಿರುವ ಕಾಲಕ್ಕೆ ಅಗ್ನಿಯ
ಅಶ್ವಯುಕ್ತ ರಥವು ನನಗಾಗಿ ಸಿದ್ಧವಿರಬೇಕು; ಒಮ್ಮೆ ನಾನು ರಥಾರೂಢನಾದೆ
ನೆಂದರೆ ಆಗ ಅಮರತ್ವವಿರಬೇಕು! ನನಗೆ ಈ ವರವು ಬೇಕು ಎಂದು
ನಿಶ್ಚಯಿಸಿದ್ದೇನೆ. ಅಗ್ನಿ ಸಂಬಂಧಿತ ಜಪ ಮತ್ತು ಹೋಮಗಳನ್ನು ಪೂರ್ತಿ
ಗೊಳಿಸದೇ ನಾನು ಯುದ್ಧಕ್ಕೆ ಕಾಲಿಟ್ಟರೆ ಆಗ ನನ್ನ ನಾಶವಾಗಬೇಕು ಎಂಬುದನ್ನು
ನಾನು ಒಪ್ಪುತ್ತೇನೆ” ಎಂದು ಹೇಳಿ ಮತ್ತೆ ಈ ರೀತಿ ನುಡಿದನು:
ಸರ್ವೋ ಹಿ ತಪಸಾ ದೇವ ವೃಣೋತ್ಯಮರತಾಂ ಪುಮಾನ್ |
ವಿಕ್ರಮೇಣ ಮಯಾ ತ್ವೇತದಮರತ್ವಂ ಪ್ರವರ್ತಿತಮ್ ‖೧೫‖

“ಹೇ ದೇವನೇ, ಎಲ್ಲ ಪುರುಷರೂ ತಪಸ್ಸಿನ ಬಲದಿಂದ ಅಮರತ್ವವನ್ನು ಬೇಡಿ
ಕೊಳ್ಳುತ್ತಾರೆ. ನಾನು ಮಾತ್ರ ಈ ಅಮರತ್ವವನ್ನು ಪರಾಕ್ರಮದಿಂದ ಸಂಪಾದಿಸುತ್ತಿದ್ದೇನೆ”
'ತಥಾಸ್ತು' ಎಂದು ಬ್ರಹ್ಮದೇವನು ನುಡಿದ ನಂತರ ಮೇಘನಾದನು ಇಂದ್ರನನ್ನು
ಬಿಟ್ಟುಕೊಟ್ಟನು. ಆನಂತರ ದೇವತೆಗಳೆಲ್ಲರೂ ಸ್ವರ್ಗಕ್ಕೆ ಹೋದರು.

ಯುದ್ಧಕಾಂಡ/೪೪

ವಾನರರು ಹಾಗೂ ರಾಕ್ಷಸರು ಇವರಲ್ಲಿ ನಡೆದ ಘನಘೋರ ಯುದ್ದದಲ್ಲಿ
ಅಂಗದನು ಇಂದ್ರಜಿತುವನ್ನು ತುಂಬಾ ಕಷ್ಟಕ್ಕೆ ಸಿಲುಕಿಸಿದನು. ಇಂದ್ರಜಿತುವಿನ
ಸಾರಥಿಯನ್ನು ಮತ್ತು ಅಶ್ವಗಳನ್ನು ಕೊಂದುಹಾಕಿದನು. ಆಗ ಇಂದ್ರಜಿತುವಿಗೆ
ತುಂಬಾ ಕ್ರೋಧವುಂಟಾಯಿತು. ಈ ಸಂದರ್ಭದಲ್ಲಿ ಬ್ರಹ್ಮದೇವನು ಇಂದ್ರಜಿತುವಿಗೆ
ಕೊಟ್ಟ ವರದ ಉಲ್ಲೇಖವು ಈ ಕೆಳಗಿನಂತೆ ಇದೆ.
ಸೋsಂತರ್ಧಾನಗತಃ ಪಾಪೋ ರಾವಣೀ ರಣಕರ್ಶಿತಃ |
ಬ್ರಹ್ಮದತ್ತವರೋ ವೀರೋ ರಾವಣಿಃ ಕ್ರೋಧಮೂರ್ಛಿತಃ ‖೩೪‖

“ರಣರಂಗದಲ್ಲಿ ತುಂಬಾ ಇಕ್ಕಟ್ಟಿನಲ್ಲಿ ಸಿಲುಕಿದ್ದರಿಂದ ಕ್ರೋಧಾಯುಕ್ತನಾದ
ಹಾಗೂ ಬ್ರಹ್ಮದೇವನಿಂದ ವರವನ್ನು ಹೊಂದಿದ ಪಾಪಿಯಾದ ಇಂದ್ರಜಿತುವು
ಮಾಯವಾದನು.”