ಈ ಪುಟವನ್ನು ಪ್ರಕಟಿಸಲಾಗಿದೆ

೩೯೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಕೊಂಡನು. 'ನೀನು ಬಂದ ಸಮಯವು ಕ್ರೂರವಿರುವದರಿಂದ ನಿನಗೆ ಕ್ರೂರಿಗಳೂ
ಭಯಂಕರರೂ ಅದ ಮಕ್ಕಳಾಗುವರು!' ಎಂದು ವಿಶ್ರವನು ಅವಳಿಗೆ ಹೇಳಿದನು.
ಅಂಥ ಮಕ್ಕಳಾಗಬಾರದೆಂದು ಕೈಕಸಿಯು ಪ್ರಾರ್ಥಿಸಿಕೊಂಡಳು. ಆಗ ವಿಶ್ರವನು
'ಕೊನೆಯ ಪುತ್ರನು ನಮ್ಮ ಕುಲಕ್ಕೆ ತಕ್ಕಂತೆ ಧರ್ಮಾತ್ಮನಾಗಲಿರುವನು' ಎಂದು
ನುಡಿದನು. ಅವನೇ ವಿಭೀಷಣ. ಇನ್ನುಳಿದ ರಾವಣ, ಕುಂಭಕರ್ಣ, ಶೂರ್ಪನಖಿ
ಇವರು ಮೊದಲ ಮೂರು ಮಕ್ಕಳು. ತಂದೆಯನ್ನು ಭೇಟಿಮಾಡಲು ಪುಷ್ಪಕ
ವಿಮಾನದಲ್ಲಿ ಆಗಮಿಸಿದ ವೈಶ್ರವಣನ ತೇಜಸ್ಸನ್ನು ಕಂಡು 'ಈತನಂತೆ ಆಗು!'
ಎಂದು ದಶಗ್ರೀವನಿಗೆ ಉಪದೇಶ ಮಾಡಿದಳು. 'ಕೇಶಿನಿ' ಎಂಬ ಹೆಸರೂ
ಇವಳದೇ ಆಗಿರಬೇಕು.

೩೬. ಕೈಕೇಯಿ

ಈಕೆಯು ಕೇಕಯ ದೇಶದ ಅಶ್ವಪತಿರಾಜನ ಕನ್ಯೆ ಮತ್ತು ದಶರಥನ ಪತ್ನಿ.
ದಶರಥ ಮತ್ತು ಕೈಕೇಯಿ ಇವರ ಪ್ರಾಯದಲ್ಲಿ ಬಹಳ ಅಂತರವಿತ್ತು. ಕೈಕೇಯಿ-
ದಶರಥರ ಮದುವೆಯ ಸಂದರ್ಭದಲ್ಲಿ ಕೈಕೇಯಿಗೆ ಹುಟ್ಟುವ ಮಗನಿಗೆ ರಾಜ್ಯವನ್ನು
ಕೊಡಬೇಕೆಂಬ ಶರತ್ತನ್ನು ಇವಳ ತಂದೆಯು ದಶರಥನಿಗೆ ಹಾಕಿದ್ದನು. ದಶರಥನು
ಈ ಶರತ್ತನ್ನು ಒಪ್ಪಿಕೊಂಡಿದ್ದನು. ಕೈಕೇಯಿಗೆ ಈ ವಿಷಯ ಗೊತ್ತಿರಲಿಲ್ಲ.
ದೇವದಾನವರಲ್ಲಿ ನಡೆದ ಕಾಳಗದಲ್ಲಿ ದಶರಥನು ದೇವತೆಗಳ ಪರವಾಗಿ
ಕಾದುತ್ತಿದ್ದಾಗ, ಅವನ ರಥದ ಗಾಲಿಯ ಅಚ್ಚು ಮುರಿದುಹೋಯಿತು. ಆಗ
ಅದಕ್ಕೆ ಪ್ರತಿಯಾಗಿ ಕೈಕೇಯಿಯು ತನ್ನ ಕೈಯನ್ನೇ ಬಳಸಿ ದಶರಥನನ್ನು ಕಾಪಾಡಲು
ಹೆಣಗಿ ಯಶಸ್ವಿಯಾದಳು. ಸಂತುಷ್ಟನಾದ ದಶರಥನು ಎರಡು ವರಗಳನ್ನು
ಕೈಕೇಯಿಗೆ ಕೊಡಲಿಚ್ಛಿಸಿದನು. ಆ ವರಗಳನ್ನು ಕೈಕೇಯಿಯು ಆಗಲೇ ಬೇಡಿಕೊಳ್ಳದೆ
ಸಮಯ ಒದಗಿದಾಗ ಕೇಳಿಕೊಳ್ಳುವುದಾಗಿ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದಳು.
ದಶರಥನು ಅದಕ್ಕೆ ಒಪ್ಪಿಕೊಂಡನು. ರಾಮನಿಗೆ ಯೌವ ರಾಜ್ಯಾಭಿಷೇಕವಾಗಲಿದೆ
ಎಂಬ ವಾರ್ತೆಯು ಇವಳಿಗೆ ತಿಳಿದುಬಂದಾಗ, ದಾಸಿಯಾದ ಮಂಥರೆಯು
ಇವಳ ಮತ್ಸರಭಾವವನ್ನು ಕೆರಳಿಸಿದಳು. ಭರತನಿಗೆ ಯೌವರಾಜ್ಯಾಬಿಷೇಕ ಮತ್ತು
ರಾಮನಿಗೆ ಹದಿನಾಲ್ಕು ವರ್ಷದ ವನವಾಸ ಎಂಬ ಎರಡು ವರಗಳನ್ನು
ದಶರಥನಿಂದ ಕೈಕೇಯಿಯು ಪಡೆಯುವಂತೆ ಮಂಥರೆಯು ಅವಳನ್ನು
ಪ್ರಚೋದಿಸಿದಳು.