ಈ ಪುಟವನ್ನು ಪ್ರಕಟಿಸಲಾಗಿದೆ

೪೧೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೬೭. ನಿವಾತಕವಚ

ಇದೊಂದು ರಾಕ್ಷಸರ ಗುಂಪು. ಪ್ರಹ್ಲಾದನ ಸಹೋದರನಾದ ಸಂಹ್ರಾದನ
ಮಗನ ಹೆಸರು ಕೂಡ ನಿವಾತಕವದನೆಂದಿತ್ತು. ಇವರೆಲ್ಲರೂ ರಾವಣನಿಗೆ
ಮಿತ್ರರಾಗಿದ್ದರು. ಇಂದ್ರನು ಕೂಡ ಇವರನ್ನು ಸೋಲಿಸುವಂತಿರಲಿಲ್ಲ. ಅರವತ್ತು
ಸಾವಿರ ಅಥವಾ ಎಪ್ಪತ್ನಾಲ್ಕುಸಾವಿರದಷ್ಟು ಸಂಖ್ಯೆ ಇವರದಾಗಿರಬಹುದು.
ಬ್ರಹ್ಮದೇವನಿಂದ ಇವರಿಗೆ ವರವು ದೊರೆತಿತ್ತು. ಇವರು ಪಾತಾಳದಲ್ಲಿಯ
ಮಣಿಮಯ ನಗರದಲ್ಲಿ ವಾಸವಾಗಿದ್ದರು.

೬೮. ನಿಶಾಕರ

ಈತನು ವಿಂಧ್ಯಪರ್ವತದ ಒಂದು ಆಶ್ರಮದಲ್ಲಿ ವಾಸವಿದ್ದ ಋಷಿ. ಸಂಪಾತಿ
ಹಾಗೂ ಜಟಾಯು ಇಬ್ಬರೂ ಬಹುಕಾಲ ಈ ಋಷಿಯ ಸೇವೆಯನ್ನು ಮಾಡಿದರು.
ಸೂರ್ಯನ ಕಿರಣಗಳಿಂದ ರೆಕ್ಕೆಗಳು ಸುಟ್ಟು ಸಂಪಾತಿಯು ಈ ಋಷಿಯ
ಆಶ್ರಮದ ಬಳಿ ಬಿದ್ದಿದ್ದಾಗ 'ನಿನಗೆ ಹೊಸ ರೆಕ್ಕೆಗಳು, ನೇತ್ರಗಳು, ಪ್ರಾಣ ಇವೆಲ್ಲ
ದೊರೆಯುವವು' ಎಂಬ ವರವನ್ನು ಕೊಟ್ಟನು. ಅಲ್ಲದೆ ಸೀತಾಪಹರಣದ ಭವಿಷ್ಯ
ವಾರ್ತೆಯನ್ನು ತಿಳಿಸಿ, 'ಅಲ್ಲಿಯವರೆಗೆ ಸಮಯದ ಪ್ರತೀಕ್ಷೆಯಲ್ಲಿರು!” ಎಂದು
ನುಡಿದು ಈ ಋಷಿಯು ಮಹಾಪ್ರಸ್ಥಾನ ಮಾಡಿ ಸ್ವರ್ಗಕ್ಕೆ ಹೋದನು.

೬೯. ನಿಷಾದ

'ನಿಷದ್ಯತೇ ಗ್ರಾಮಶೇಷಸೀಮಾಯಾಮ್'- 'ಯಾರು ಗ್ರಾಮದ ಸೀಮೆಯ
ಅಂಚಿನಲ್ಲಿ ವಾಸಿಸುತ್ತಾನೋ ಅವನು ನಿಷಾದನು' ಎಂಬ ಶಬ್ದೋತ್ಪತ್ತಿ ಇದೆ.
'ಚತ್ವಾರೋ ವರ್ಣಾಃ ಪಂಚಮೋ ನಿಷಾದಃ' ಎಂಬಂತೆ ಐದು ತರಹದ ಜನರಿಂದ
ಕೂಡಿದ ಭಾರತೀಯ ಸಮಾಜದಲ್ಲಿ ಚಾತುರ್ವರ್ಣ್ಯದವರನ್ನು ಹೊರತುಪಡಿಸಿ,
ಇನ್ನುಳಿದ ಐದನೆಯ ಭಾಗದವರೆಲ್ಲರನ್ನೂ ನಿಷಾದರೆಂದುಪರಿಗಣಿಸುತ್ತಿದ್ದಿರ
ಬಹುದು. ಬೌದ್ಧಾಯನ ಹಾಗೂ ಮಹಾಭಾರತ ಗ್ರಂಥಗಳನುಸಾರ ಒಬ್ಬ
ಬ್ರಾಹ್ಮಣಪುರುಷ ಮತ್ತು ಓರ್ವ ಶೂದ್ರಸ್ತ್ರೀ ಇವರ ಸಂಬಂಧದಿಂದ ನಿಷಾದ
ಜಾತಿಯು ಹುಟ್ಟಿರುವದೆಂದಿದೆ. ನಿಷಾದರ ವಿಷಯವು ಐತರೇಯ ಬ್ರಾಹ್ಮಣದಲ್ಲಿ
ಪ್ರಸ್ತಾಪವಿದೆ. ನಮ್ಮ ಸಮಾಜವ್ಯವಸ್ಥೆಯಲ್ಲಿ ನಿಷಾದರಿಗೆ ಗೌಣಸ್ಥಾನವನ್ನು
ಕೊಡಲಾಗಿದ್ದರೂ ಅವರಿಗೆ ಕೆಲವು ಧಾರ್ಮಿಕ ಅಧಿಕಾರಗಳೂ ಇದ್ದವು. ನಿಷಾದರು
ಮೀನುಗಾರಿಕೆ ಮತ್ತು ಬೇಟೆಯನ್ನು ಅವಲಂಬಿಸಿರುತ್ತಿದ್ದರು. ಪ್ರಾಚೀನ ಕಾಲದಲ್ಲಿ