ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೩೧

ಅವಮಾನಗೊಳಿಸಿದ್ದಕ್ಕಾಗಿ ನೃಗರಾಜನು ಶಾಪವನ್ನು ಅನುಭವಿಸಬೇಕಾಯಿತು. ಪಿತನ ಆಜ್ಞೆಯನ್ನು ಪಾಲಿಸದ ವಿಶ್ವಾಮಿತ್ರನ ಪುತ್ರರಿಗೆ, ಹಾಗೂ ವಿಶ್ವಾಮಿತ್ರನು ಕೊಟ್ಟ ಯಜ್ಞದ ಆಮಂತ್ರಣವನ್ನು ಅಲಕ್ಷ್ಯಿಸಿದ ವಸಿಷ್ಠ ಪುತ್ರರಿಗೆ ಶಾಪ ದೊರೆಯಿತು. ತಂದೆಯ ಆಜ್ಞೆಂಯನ್ನು ಉಲ್ಲಂಘಿಸಿದ ಕಾರಣ ಯದುವಿಗೆ ಶಾಪ ತಗುಲಿತು. ವಸಿಷ್ಠನು ಗುರುಗಳನ್ನು ಅವಮಾನಿಸಿದ್ದಕ್ಕಾಗಿ ಮತ್ತು ಅವರ ಆಜ್ಞೆಯನ್ನು ಮೀರಿದ್ದಕ್ಕಾಗಿ ನಿಮಿರಾಜನಿಗೆ ವಸಿಷ್ಠನು ಶಾಪವನ್ನಿತ್ತನು. ಋಷಿಗಳನ್ನು ಭಯಪಡಿಸಿದ್ದಕ್ಕಾಗಿ ಮಾರೀಚನಿಗೆ ಅಗಸ್ತ್ಯ ಋಷಿಗಳು ಶಾಪವನ್ನು ಕೊಟ್ಟರು. ಅದೇ ರೀತಿ ಸ್ಥೂಲಶಿರಾ ಋಷಿಗಳು 'ವಿಶ್ವಾವಸು' ಎಂಬ ರಾಕ್ಷಸನಿಗೆ ಶಾಪಕೊಟ್ಟರು.

ವಸಿಷ್ಠ ವಿಶ್ವಾಮಿತ್ರ, ಮತಂಗಾದಿ ಋಷಿಗಳು ಶಾಪವನ್ನು ಕೊಡಲು ಉದ್ಯುಕ್ತರಾಗುವ ಪ್ರಮುಖ ಕಾರಣವೆಂದರೆ, ಅವರ ತಲೆಗೇರಿದ ಕೋಪ. ದಶರಥನು ಕೈಕೇಯಿಗೆ ಅವಳ ಛಲಕ್ಕಾಗಿ ಶಾಪಕೊಟ್ಟನು. ದೇಹಸಹಿತ ಸ್ವರ್ಗವನ್ನು ಸೇರಬೇಕೆಂಬ ಆಕಾಂಕ್ಷೆಯಿಟ್ಟುಕೊಂಡಿದ್ದರಿಂದ ತ್ರಿಶಂಕುವಿಗೆ ಶಾಪ ದೊರೆಯಿತು. ತಾಟಕಾ ವಾಸ ವಾಗಿದ್ದರಿಂದ ತಾಟಕವನಕ್ಕೆ ಶಾಪ ತಗುಲಿತು. ದಂಡರಾಜನ ಸಂಪರ್ಕದಿಂದ ದಂಡಕಾರಣ್ಯವು ಶಾಪಕ್ಕೊಳಗಾಯಿತು. ರಾವಣನ ಮೂಲಕ ಲಂಕೆಗೆ ಶಾಪ ತಗಲಿತು. ಅನಿಷ್ಟ ಭೋಜನವನ್ನು ಕೊಟ್ಟಿದ್ದರಿಂದ ಬ್ರಹ್ಮದತ್ತ ಹಾಗೂ ಸೌದಾಸರಿಗೆ ಶಾಪ ಬಂದಿತು. ಬ್ರಾಹ್ಮಣನಿಗೆ ಶಾಪ ಕೊಡತಕ್ಕದ್ದಲ್ಲವೆಂಬ ಸಂಕೇತವಿದ್ದರೂ ಕೋಲಿನಿಂದ ನಾಯಿಯನ್ನು ಹೊಡೆದ ಬ್ರಾಹ್ಮಣನಿಗೆ ಶಾಪ ದೊರೆತ ಉದಾಹರಣೆಯು ಕಂಡುಬಂದಿದೆ.

ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಲ್ಪಟ್ಟ ಶಾಪಗಳ ಕಾರಣಗಳು ಸ್ಪಷ್ಟವಾಗಿಲ್ಲ.

ಶಾಪದಿಂದಾದ ಪರಿಣಾಮಗಳು

ಶಾಪದಿಂದಾಗುವ ಪರಿಣಾಮಗಳು ಬಹುದೀರ್ಘಕಾಲದವರೆಗೆ ನಡೆಯುವಂತಿದ್ದು ಕ್ಲೇಶಕರವಾಗಿರುತ್ತವೆ. ಮೃತ್ಯು, ಕೊಲೆ, ವಿನಾಶ, ವಿಯೋಗ, ಕುರೂಪತೆ, ಸೌಂದರ್ಯ ವಿಹೀನತೆ, ಹೀನಯೋನಿಯಲ್ಲಿ ಜನ್ಮ, ಹೀನಜೀವನ, ನಿಕೃಷ್ಟ ಆಹಾರ, ದೈಹಿಕ ದೌರ್ಬಲ್ಯ ಅಪತ್ಯಹಾನಿ, ನಿರ್ವಂಶತೆ, ಕಾಳಗದಲ್ಲಿ ಅಪಜಯ ಮುಂತಾದ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.