ಈ ಪುಟವನ್ನು ಪ್ರಕಟಿಸಲಾಗಿದೆ

೪೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ರಾಮನಲ್ಲಿದ್ದ ಅತಿಪ್ರೀತಿಯ ಬಗ್ಗೆ ಲಕ್ಷಣನು ಕೌಸಲ್ಯೆಗೆ ವಿವರಿಸಿ ಈ ಕೆಳಗಿನಂತೆ ಹೇಳುತ್ತಾನೆ:


           ಅನುರಕ್ತೋsಸ್ಮಿ ಭಾವೇನ ಭ್ರಾತರಂ ದೇವಿ ತತ್ತ್ವತಃ |
           ಸತ್ಯೇನ ಧನುಷಾ ಚೈವ ದತ್ತೇನೇಷ್ಟೇನ ತೇ ಶಪೇ ॥೧೬॥

“ಹೇ ದೇವಿ! ನಾನು ಮನಃಪೂರ್ತಿಯಾಗಿ ನನ್ನ ಅಣ್ಣನನ್ನು ಪ್ರೀತಿಸುತ್ತೇನೆ. ಇದನ್ನು ನಾನು ಸತ್ಯ, ಧನುಷ್ಯ, ದಾನ, ಯಜ್ಞ ಯಾಗಗಳನ್ನು ಆಣೆ ಇಟ್ಟು ಹೇಳುತ್ತೇನೆ.”೨೫ ಈ ಎರಡೂ ಉದಾಹರಣೆಗಳಲ್ಲಿ ಅತ್ಯಂತ ಪ್ರಿಯರಾದ ವ್ಯಕ್ತಿಗಳ ಮತ್ತು ಪ್ರಿಯವಸ್ತುಗಳ ಉಲ್ಲೇಕವಿದೆ. ತಾಯಿ-ತಂದೆ, ಗುರುಗಳು, ಪತಿ-ಪತ್ನಿ, ಪುತ್ರ-ಪುತ್ರಿ, ಗೆಳೆಯ, ದೇವದೇವತೆಗಳು, ಭಕ್ತರು, ಧರ್ಮಗ್ರಂಥಗಳು, ಪ್ರಿಯವಾದ ವಸ್ತುಗಳು, ಉಪಜೀವಿಕೆಯ ಸಾಧನಗಳು, ಇವೆಲ್ಲವುಗಳನ್ನು ಉಲ್ಲೇಖಿಸಿರುವ ಶಪಥವು ಹೆಚ್ಚು ಪ್ರಭಾವಶಾಲಿ ಎನಿಸುತ್ತದೆ. ವಿಭೀಷಣನಿಗೆ ಆಶ್ವಾಸನೆಯನ್ನು ಕೊಡುವಾಗ ರಾಮನು ತನ್ನ ಮೂರು ಬಂಧುಗಳ ಆಣೆಯಿಟ್ಟು ಈ ರೀತಿ ಎಂದಿದ್ದಾನೆ:


           ಅಹತ್ವಾ ರಾವಣಂ ಸಂಖ್ಯೇ ಸಪುತ್ರಜನಬಾಂಧವಮ್ |
           ಅಯೋಧ್ಯಾಂ ನ ಪ್ರವೇಕ್ಷ್ಯಾಮಿ ತ್ರಿಭಿಸ್ತೈ ಭ್ರಾತೃಭಿಃ ಶಪೇ ॥೨೧॥

“ಪುತ್ರ ಬಾಂಧವರ ಸಹಿತ ರಾವಣನನ್ನು ಸಂಗ್ರಾಮದಲ್ಲಿ ವಧಿಸದೇ ನಾನು ಅಯೋಧ್ಯೆಯನ್ನು ಪ್ರವೇಶಿಸುವುದಿಲ್ಲ; ಇದನ್ನು ನಾನು ನನ್ನ ಮೂರು ಬಂಧುಗಳ ಶಪಥವನ್ನಿಟ್ಟು ಹೇಳುತ್ತೇನೆ.”೨೬ ಸ್ವಂತದ ನುಡಿಯಲ್ಲಿಯ ಸತ್ಯತೆ, ಚಾರಿತ್ರ್ಯ, ಸಾಮರ್ಥ್ಯ ಇತ್ಯಾದಿಗಳನ್ನು ಖಚಿತಪಡಿಸಲು ಸ್ವಂತಕ್ಕೆ ಈ ರೀತಿಯ ಶಪಥಗಳನ್ನು ಮಾಡುತ್ತಾರೆ. ನ್ಯಾಯದಾನದ ಸಮಯದಲ್ಲಿ ಶಪಥಕ್ಕೆ ಇಂದು ಕೂಡ ಮಹತ್ವವಿದೆ. ಧರ್ಮಗ್ರಂಥವನ್ನು ಮುಟ್ಟಿ “I speak the truth, the only truth, and nothing but the truth” ಎಂದು ಶಪಥಪ್ರಧಾನ, ಶಪಥಸ್ವೀಕಾರಗಳ ವಿಧಿ ನಡೆಯುತ್ತದೆ.

——————

೨೫. ಅಯೋಧ್ಯಾಕಾಂಡ, ೨೧.
೨೬. ಯುದ್ಧಕಾಂಡ, ೧೯.