ಈ ಪುಟವನ್ನು ಪ್ರಕಟಿಸಲಾಗಿದೆ

೪೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಶಿಕ್ಷೆ, ಶಪಥದಲ್ಲಿ ಶಾಪವು ಗರ್ಭಿತವಾಗಿದೆ; ಆದರೆ ಶಾಪದಲ್ಲಿ ಶಪಥವಿರುವುದಿಲ್ಲ. ಶಪಥದಲ್ಲಿಯ ಅರ್ಥಗರ್ಭಿತ ದಂಡನೆಯು ಸ್ವಂತದ ಮಟ್ಟಿಗೆ ಬಂಧನಕಾರಕವಿರುತ್ತದೆ. ಶಾಪದಲ್ಲಿ ಶಾಪಿತನಿಗೆ ದಂಡನೆಯನ್ನು ನುಡಿದಿರುತ್ತಾರೆ. ಶಾಪವನ್ನು ಕೊಡುವ ಅರ್ಹತೆಯನ್ನು ಹೊಂದಲು ಘನತಪಸ್ಸನ್ನು ಆಚರಿಸಬೇಕಾಗುತ್ತದೆ; ಶಪಥ ಮಾಡಲು ಇದು ಯಾವುದೂ ಬೇಕಿಲ್ಲ. ಶಾಪ ಕೊಡುವುದರಿಂದ ತಪಸ್ಸಿದ್ಧಿಯು ಕಡಿಮೆಯಾಗುತ್ತದೆ; ಶಪಥದ ಸಂದರ್ಭದಲ್ಲಿ ಈ ಸಂಭವವಿಲ್ಲ. ಶಾಪಕ್ಕೆ ಉಃಶಾಪವಿರಲು ಸಾಧ್ಯ; ಆದರೆ ಶಪಥದ ಹೊಣೆಯಿಂದ ಬಿಡುಗಡೆ ಇಲ್ಲ. ಶಾಪವು ತಿರುಗುಬಾಣವಾಗುವ ಭಯವಿರುತ್ತದೆ; ಶಪಥದಲ್ಲಿ ಆ ಭಯವಿಲ್ಲ. ಶಪಥ-ಆಣೆಗಳು ವರ್ಣಭೇದ ವನ್ನವಲಂಬಿಸಿ ಭಿನ್ನ ಭಿನ್ನವಾಗಿರಬಹುದು; ಆದರೆ ಶಾಪದಲ್ಲಿ ವರ್ಣಭೇದವಿಲ್ಲ. ಶಪಥವು ಪರಿಣಾಮಕಾರಿಯಾಗಲು ಯಾವುದೊಂದು ಮಾಧ್ಯಮವಿದ್ದರೆ, ಅದರ ಪ್ರಭಾವ ಹೆಚ್ಚಾಗುವುದು. ಶಾಪದ ಸಂದರ್ಭದಲ್ಲಿ ತಪೋಬಲವು ಪ್ರಭಾವವನ್ನು ಬೀರುತ್ತದೆ.೩೨ ಈ ರೀತಿಯಾಗಿ ಶಾಪ-ಶಪಥಗಳ ಭೇದವನ್ನು ಸಂಸ್ಕೃತಿಕೋಶ ಕರ್ತರು ವಿವರಿಸಿದ್ದಾರೆ.

ಸತ್ಯಕ್ರಿಯೆ

ಸತ್ಯಕ್ರಿಯೆ, ದಿವ್ಯ- ಇವು ಸಹ ಶಪಥದ ಪ್ರಕಾರಗಳು. ಇವುಗಳ ಉದಾಹರಣೆಗಳು ಪ್ರಾಚೀನ ಭಾರತದ ವಾಙ್ಮಯದಲ್ಲಿ ಸಾಕಷ್ಟು ಕಂಡುಬರುತ್ತವೆ. ಡಾ|| ರಾ.ಚಿ. ಢೇರೆ ಇವರು 'ಸಂತಸಾಹಿತ್ಯ ಮತ್ತು ಸತ್ಯಕ್ರಿಯೆ' ಎಂಬ ಲೇಖದಲ್ಲಿ ಸತ್ಯಕ್ರಿಯೆ ಮತ್ತು ದಿವ್ಯ ಇವುಗಳನ್ನು ಕುರಿತು ಕೂಲಂಕಷವಾಗಿ, ಉದಾಹರಣೆಗಳನ್ನು ಕೊಟ್ಟು ವಿಮರ್ಶಿಸಿ ಬರೆದಿದ್ದಾರೆ. ಸತ್ಯಕ್ರಿಯೆ ಮತ್ತು ದಿವ್ಯ ಇವುಗಳನ್ನು ಅವರ ಹೇಳಿಕೆಯನ್ನೇ ಪರಾಮರ್ಶಿಸಿ ಅರಿತುಕೊಳ್ಳುವುದು ಲೇಸು!೩೩ 'ಸತ್ಯದ ಉದ್ಗಾರವು ಇಷ್ಟವಿದ್ದ ಚಮತ್ಕೃತಿಯನ್ನು ರೂಪಿಸಬಲ್ಲದು!' ಎಂಬ ಮನೋಭಾವವು ಪ್ರಾಚೀನ ಪರಂಪರೆಯಲ್ಲಿತ್ತು. ತನ್ನ ಅಥವಾ ಪರರ ಸಂಕಷ್ಟಗಳನ್ನು ನಿವಾರಿಸಲು ಇಲ್ಲವೇ ಸ್ವಂತದ ನಿರಪರಾಧಿತ್ವವನ್ನು ರುಜುವಾತುಗೊಳಿಸಲು ಜನರು ಸತ್ಯೋಕ್ತಿಯನ್ನು ಅವಲಂಬಿಸುತ್ತಿದ್ದರು. ಸತ್ಯವನ್ನು ನುಡಿದು ಸ್ವಪರೀಕ್ಷೆಗೆ ಅಣಿಯಾಗುವುದೆಂದರೆ 'ಸತ್ಯಕ್ರಿಯೆ' ಎಂಬ ರೂಢಿ ಇತ್ತು. ಈ ಕ್ರಿಯೆಯಲ್ಲಿ ಜಲಸ್ಪರ್ಶ ಇಲ್ಲವೇ ನೀರನ್ನು

——————
೩೨. ಭಾರತೀಯ ಸಂಸ್ಕೃತಿಕೋಶ, ಖಂಡ ೯, ಪು.೨೧೮.
೩೩. ಸಂತಸಾಹಿತ್ಯ ಮತ್ತು ಲೋಕಸಾಹಿತ್ಯ, ಪು. ೧೭೭, ೧೮೨-೮೩, ೧೮೫.