ಈ ಪುಟವನ್ನು ಪ್ರಕಟಿಸಲಾಗಿದೆ

೫೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

“ನಾಳೆಯ ಉದಯಕಾಲದಲ್ಲಿ ಜನಕನ್ಯೆಯಾದ ಮೈಥಿಲಿಯು ಸಭೆಗೆ ಬಂದು ತನ್ನ ಮತ್ತು ನನ್ನ ಮೇಲಿನ ಅಪವಾದಗಳನ್ನು ಹೋಗಲಾಡಿಸಲು ಶಪಥವನ್ನು ಮಾಡಬೇಕು!”೩೪ ಹೇಳಿಕಳುಹಿಸಿದಂತೆ ವಾಲ್ಮೀಕಿಯು ಸೀತೆಯನ್ನು ಕರೆದುಕೊಂಡು ಬಂದನು. ಆತನು ತನ್ನ ತಪಶ್ಚರ್ಯೆಯನ್ನೇ ಪಣಕ್ಕೆ ಒಡ್ಡಿ, “ಸೀತೆಯು ಚರಿತ್ರ ಶುದ್ಧಳು' ಎಂದು ರಾಮನಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದನು. ಸೀತೆಯು ತನ್ನ ಶುದ್ಧತೆಯನ್ನು ದೃಢಗೊಳಿಸಲು 'ಸತ್ಯಕ್ರಿಯೆ'ಯನ್ನು ಅವಲಂಬಿಸಿದಳು. ಭೂಮಾತೆಯನ್ನುದ್ದೇಶಿಸಿ ನುಡಿದ ಅವಳ ಉದ್ಗಾರಗಳು ಈ ರೀತಿ:


           ಯಥಾಹಂ ರಾಘವಾದನ್ಯಂ ಮನಸಾಪಿ ನ ಚಿಂತಯೇ |
           ತಥಾ ಮೇ ಮಾಧವೀ ದೇವೀ ವಿವರಂ ದಾತುಮರ್ಹತಿ ॥೧೪॥
           ಮನಸಾ ಕರ್ಮಣಾ ವಾಚಾ ಯಥಾ ರಾಮಂ ಸಮರ್ಚಯೇ |
           ತಥಾ ಮೇ ಮಾಧವೀ ದೇವೀ ವಿವರಂ ದಾತುಮರ್ಹತಿ ||೧೫॥
           ಯಥೈತತ್ಸತ್ಯಮುಕ್ತಂ ಮೇ ವೇದ್ಮಿ ರಾಮಾತ್ಸರಂ ನ ಚ |
           ತಥಾ ಮೇ ಮಾಧವೀ ದೇವೀ ವಿವರಂ ದಾತುಮರ್ಹತಿ ||೧೬||

“ರಘೂತ್ತಮ ರಾಮನ ಹೊರತು ಯಾವ ಅನ್ಯಪುರುಷನನ್ನೂ ನಾನು ಮನಸ್ಸಿನಲ್ಲಿ ತಂದಿರದಿದ್ದರೆ ವಿಷ್ಣುಪತ್ನಿಯಾದ ಭೂದೇವಿ ನನ್ನನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಲಿ! ಕಾಯೇನ ವಚಸಾ ಮನಸಾ ನಾನು ರಾಮನನ್ನೇ ಆರಾಧಿಸಿದ್ದರೆ ಈ ಭೂತಾಯಿಯು ನನ್ನನ್ನು ಉಡಿಯಲ್ಲಿ ಹಾಕಿಕೊಳ್ಳಲಿ! ರಾಮನನ್ನು ಬಿಟ್ಟು ಅನ್ಯಪುರುಷನತ್ತ ನನ್ನ ಮನಸ್ಸು ಸುಳಿದಿರದಿದ್ದ ಸಂಗತಿ ನಿಜವಿದ್ದರೆ, ಭೂದೇವಿಯು ನನ್ನ ಒಡಲಿನಲ್ಲಿ ಸ್ಥಾನವೀಯಲಿ!೩೫

ಇದೇ ತರಹದ ಇನ್ನೊಂದು ಸತ್ಯಕ್ರಿಯೆಯು ಸೀತೆಯಿಂದ ನಡೆದಿದೆ. ಹನುಮಂತನ ಬಾಲಕ್ಕೆ ಲಂಕೆಯಲ್ಲಿ ಬೆಂಕಿ ಹಚ್ಚಿದಾಗ, ಅಗ್ನಿಯಿಂದ ಅವನ ಬಾಲವು ಸುಡಬಾರದೆಂದು; ಸಂರಕ್ಷಿಸಲ್ಪಡಬೇಕು!- ಎಂದು ಸೀತೆಯು ಅಗ್ನಿಯನ್ನು ಪ್ರಾರ್ಥಿಸಿದ್ದಾಳೆ-


           ಯದ್ಯಸ್ತಿ ಪತಿಶುಶ್ರೂಷಾ ಯದ್ಯಸ್ತಿ ಚರಿತಂ ತಪಃ |
           ಯದಿ ವಾ ತ್ವೇಕಪತ್ನೀತ್ವಂ ಶೀತೋ ಭವ ಹನೂಮತಃ ||೨೭||

——————
೩೪. ಉತ್ತರಕಾಂಡ, ೯೫.
೩೫. ಉತ್ತರಕಾಂಡ, ೯೭.