ಈ ಪುಟವನ್ನು ಪ್ರಕಟಿಸಲಾಗಿದೆ

೭೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ರಾಮಾಯಣವು ಒಂದು ಆದಿ ಮಹಾಕಾವ್ಯ; ಮಹಾಕಾವ್ಯವು ಮಾನವನ ದಾಗಿರುತ್ತದೆ. ರಾಯ್ಟ್ ಆನರೆಬಲ್ ಶ್ರೀ ವ್ಹಿ. ಎಸ್. ಶ್ರೀನಿವಾಸ ಶಾಸ್ತ್ರಿಯವರ ಹೇಳಿಕೆಯೆಂದರೆ- “The fundamental postulate is that an epic is a great work of art which is intended expressly, for the edification of man... The epic is to be read with a view to benefit by its teaching, to draw at every turn lessons of supreme value for the conduct and regulation of ourselves"೫೦ ಎಂದು ಆಗಿದೆ. ಇದು ಸ್ಪಷ್ಟವಾಗಿರುವುದರಿಂದ ಇದರ ವಿವರಣೆ ಅನಗತ್ಯವೆನಿಸುತ್ತದೆ. ರಾಮಾಯಣದಲ್ಲಿಯ ವ್ಯಕ್ತಿಗಳ ಸ್ವಭಾವ, ಗುಣಾವಗುಣಗಳು, ವರ್ತನೆ, ಕೃತಿ, ನಡೆನುಡಿ, ಎಲ್ಲವೂ ಮಾನವರದಾಗಿದೆ. ವಾಲ್ಮೀಕಿಯು ಮನುಷ್ಯ-ಸ್ವಭಾವದ ವಿಶ್ಲೇಷನೆಯನ್ನು, ಪದರು ಪದರುಗಳಾಗಿ, ಅತಿ ಸೂಕ್ಷ್ಮವಾಗಿ, ಮನೋಹರವಾಗಿ ಬಿಡಿಸಿ ನಮ್ಮ ಮುಂದಿಟ್ಟಿದ್ದಾನೆ. ಸೀತೆಯು ರಾಮನೊಡನೆ ವನವಾಸಕ್ಕೆ ತೆರಳುವುದೆಂದು ಇನ್ನೂ ನಿಶ್ಚಿತವಾಗಿರದಾಗ, ರಾಮನು ಸೀತೆಯನ್ನುದ್ದೇಶಿಸಿ, ತಾನು ಅಯೋಧ್ಯೆಯಲ್ಲಿ ಇರದ ಸಮಯದಲ್ಲಿ ಸೀತೆಯು ಯಾವ ರೀತಿ ವ್ಯವಹರಿಸ ಬೇಕೆಂದು ತಿಳಿಸಿ ಹೇಳಿದನು: “ವೈಭವಸಂಪನ್ನರು ಬೇರೆಯವರ ಸ್ತುತಿಯನ್ನು ಸಹಿಸಲಾರರು! ಕಾರಣ ಭರತನ ಎದುರಿನಲ್ಲಿ ನೀನು ನನ್ನನು ಹೊಗಳಬೇಡ!” ಇದೊಂದು ವ್ಯಾವಹಾರಿಕ ಸೂಚನೆಯಂತಿದ್ದರೂ ವಾಲ್ಮೀಕಿಯು ಎಷ್ಟೊಂದು ಸೂಕ್ಷ್ಮವಾಗಿ ಮನುಷ್ಯಸ್ವಭಾವವನ್ನು ನಿರೀಕ್ಷಿಸಿದ್ದಾನೆ ಎಂಬುದು ವಿದಿತವಾಗುತ್ತದೆ. ದಶರಥನ ಆಜ್ಞೆಯನ್ನು ಕೌಸಲ್ಯೆಗೆ ತಿಳಿಸುವಾಗ ರಾಮನು ತನ್ನ ವ್ಯಥೆಯನ್ನು ಅದುಮಿಟ್ಟಿದ್ದಾನೆ; ಆದರೆ ಆ ಸಂಗತಿಯನ್ನೇ ಸಿತೆ ಮತ್ತು ಲಕ್ಷ್ಮಣರಿಗೆ ಹೇಳುವಾಗ ತನ್ನ ದುಃಖವನ್ನೆಲ್ಲ ತೋಡಿಕೊಂಡಿದ್ದಾನೆ. ತಾನು ವನವಾಸಕ್ಕೆ ತೆರಳಿದಾಗ ಲಕ್ಷಣ ಮತ್ತು ಸುಮಂತ ಇವರು ಅಯೋಧ್ಯೆಯಲ್ಲಿ ಉಳಿಯುವುದು ಉಚಿತವೆಂಬುದನ್ನು ಪರಿಪರಿಯಾಗಿ ತಿಳಿಸುವಾಗಿನ ರಾಮನ ಮನಸ್ಸಿನ ತುಮುಲವನ್ನು ವಾಲ್ಮೀಕಿಯು ಬಹಳ ಸುಂದರವಾಗಿ ಬಣ್ಣಿಸಿದ್ದಾನೆ. ರಾಮನ ಎದುರಿನಲ್ಲಿಯೇ ವಿರಾಧನು ತನ್ನ ತೊಡೆಯ ಮೇಲೆ ಸೀತೆಯನ್ನು ಕುಳ್ಳಿರಿಸಿಕೊಂಡು ಆಡಿದ ಮಾತುಗಳಿಂದ ರಾಮನ ಹೃದಯವು ತತ್ತರಿಸಿತು. ಆ ಸಂದರ್ಭದಲ್ಲಿ ಆತನಿಗಾದ ಅತೀವ ದುಃಖ, ಸೀತೆಗಾಗಿ ಅವನು ಮಾಡಿದ
——————
೫೦. Lectures on Ramayana.