ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೨ ವೈಶಾಖ ಅಂದಿದ್ದರು. ಮಳೆ ನಿಂತು ಮನೆಗೆ ಹಿಂದಿರುಗಿದ ತರುವಾಯ ಈ ಮಂತ್ರವನ್ನು ಬರೆದುಕೊಟ್ಟು ಬಾಯಿಪಾಠ ಮಾಡಿಸಿ, “ನಿನಗೆ ಯಾವ ಕಾರಣಕ್ಕಾಗಲಿ ಭಯವಾದರೆ ಈ ಮಂತ್ರವನ್ನು ನಿನ್ನಲ್ಲಿ ಹೇಳಿಕೊ, ಇದು ನಿನ್ನನ್ನು ರಕ್ಷಿಸಿಬಲ್ಲದು” ಎಂದು ಉಪದೇಶವಿತ್ತಿದ್ದರು. ಮಂತ್ರವನ್ನು ಮತ್ತೊಮ್ಮೆ ಉಚ್ಚರಿಸಿ, ಭಗವಂತನನ್ನು ಮನದಲ್ಲೇ ಪ್ರಾರ್ಥನೆ ಮಾಡುತ್ತ, ಹಾಸಿಗೆಯ ಮೇಲೆ ಉರುಳಿ ಕಣ್ಣುಚ್ಚಿದಳು. ಆದರೆ ಮರುಕ್ಷಣವೇ ರೆಪ್ಪೆ ಬಿಚ್ಚಿತು. ದೃಷ್ಟಿ ಬಾಗಿಲಲ್ಲಿ ನಿಟ್ಟಿತು. ಹಾವು ಆ ಕೋಣೆಗೆ ಬಂದಾಗಿನಿಂದ ಒಂದು ಮೂಲೆಗೆ ರಾತ್ರಿಯ ವೇಳೆ ಹೊತ್ತಿಸಿ ಇಡುತ್ತಿದ್ದ ದೀವಿಗೆಯ ಮಂದಬೆಳಕಿನಲ್ಲಿ ಅರಿಶಿನ ತೇಗದ ಬಾಗಿಲು ತಾನೇ ಒಂದು ದೆವ್ವದ ರೂಪ ತಾಳಿದಂತೆ ಗೋಚರಿಸಿ ಕಳವಳ ಹುಟ್ಟಿಸಿತು. ಹಾಗೆ ಅವಳ ದೃಷ್ಟಿ ಆ ಬಾಗಿಲಿನ ಮೇಲೆ ಕೇಂದ್ರೀಕೃತವಾದಂತೆ, ಆ ಬಾಗಿಲಿಗೆ ಒಳಗಡೆಯಿಂದ ತಾಪಾಳು ಇಲ್ಲದಿರುವ ಸಂಗತಿ, ಇದೀಗ ಹೊಸದಾಗಿ ಅರಿವಾಯಿತೇನೋ ಎನ್ನುವಂತೆ ಗ್ರಹಿಕೆಯಾಯಿತು. ಒಡನೆಯೆ, ಭೂತಕ್ಕೆ ತಾಪಾಳು ಇದ್ದರೂ ಒಂದೆ, ಇಲ್ಲದಿದ್ದರೂ ಒಂದೆ, ಅದಕ್ಕೆ ಯಾವುದು ತಡೆ? -ಎನ್ನಿಸಿ, ಮತ್ತೊಮ್ಮೆ ಒಳಗೊಳಗೇ ನಡುಗಿದಳು. ಹಾಗೆಯೇ ದೃಷ್ಟಿಸುತ್ತ ಕಣ್ಮುಚ್ಚಿದಳು... ಆದರೆ ನಿದ್ದೆ ಮಾತ್ರ ಅವಳ ಬಳಿ ಸುಳಿಯಲಿಲ್ಲ. ಕಣ್ಣು ಮುಚ್ಚಲು ಅವಳು ಎಷ್ಟೇ ಪ್ರಶ್ನಿಸಿದರೂ ಕಣ್ಣಿವೆ ಹೀಗೆ ಮುಚ್ಚಿದರೆ ಹಾಗೆ ತೆರೆಯುವುದು. ಹಾಗೆ ತೆರದಾಗಿನ ದೃಷ್ಟಿ ಮಾತ್ರ ಸಂಪೂರ್ಣವಾಗಿ ಬಾಗಿಲಿನತ್ತಲೆ ಹೊರಳುವುದು. ಒಂದೇ ಜಾಗದಲ್ಲಿ ಹೀಗೆ ನೆಟ್ಟಿದ್ದರಿಂದಲೋ ಏನೊ, ಕಣ್ಣುಗಳು ಸೋತು ಬಾಡಲುಪಕ್ರಮಿಸಿದವು... ಆಗ ಮತ್ತೆ ಹೆಜ್ಜೆಯ ಸಪ್ಪಳ ಕೇಳಬೇಕೆ? ಮೈಯೆಲ್ಲ ಕಿವಿಯಾಗಿ ಆಲಿಸಿದಳು... ಆದರೆ ಬಾಗಿಲಿಗೆ ಕೊಂಚ ದೂರದಲ್ಲೆ ಆ ಸಪ್ಪಳ ನಿಂತಂತೆ ಅವಳಿಗೆ ಭಾಸವಾಯಿತು. ತುಸುಕಾಲ ನಿಶ್ಯಬ್ದ. ಅವಳ ಹೃದಯದ ಡುಬ್ ಡುಬ್, ಬಡಿತ ಸ್ಪಷ್ಟವಾಗಿ ಕೇಳಿಬರುವಷ್ಟು, ನಿಶ್ಯಬ್ದ! - ಎದ್ದು ಕುಳಿತಳು. ಮೈಯೆಲ್ಲ ಸೆಟೆದು ನಿಶ್ಚಲವಾಯಿತು. ಮುಂದೆ ಕೆಲ ನಿಮಿಷಗಳಲ್ಲಿ ಆ ಸಪ್ಪಳ ಮತ್ತೆ ಆರಂಭವಾಗಿ ಹಿಂದೆ ಹಿಂದೆ ಮಂದವಾಗುತ್ತ ದೂರ ದೂರ ಹೊರಟು ಹೋದ ಅನುಭವ! ರುಕ್ಕಿಣಿಯು ಬೆವರಿನಲ್ಲಿ ತೊಯ್ದು ಹೋಗಿದ್ದಳು... ಇದು ಭೂತವೆ?