ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೨೫೯ ನಂಜೇಗೌಡ, ಗಂಗಪ್ಪ ಮತ್ತು ಅವರ ಗುಂಪು ಅರ್ಧದಲ್ಲೇ ಎದ್ದರು. ಶಿವಪಾದಪ್ಪನವರು ವಾಚನವನ್ನು ನಿಲ್ಲಿಸಿ, “ಯಾಕೆ?” ಎನ್ನುವಂತೆ ಸನ್ನೆ ಮಾಡಿದರು. ನಂಜೇಗೌಡರು, “ನ್ಯಾಯ...ಬುದ್ಧಿ” ಎಂದು ಮೆಲ್ಲನುಸುರಿ ಸ್ವಾಮಿಗಳಿಗೆ ಅರಿಕೆ ಮಾಡಿದರು. ಸ್ವಾಮಿಗಳು, “ಅರ್ಧದಲ್ಲಿ ಯಾತಕ್ಕೆ ಏರಿ?- ಕೂತುಗೊಳ್ಳಿ, ಇನ್ನೊಂದು ಅರ್ಧ ಅಥವ ಮುಕ್ಕಾಲು ಗಂಟೆಯಲ್ಲಿ ಎಲ್ಲವೂ ಮುಗಿದು ಹೋಗುತ್ತೆ. ನಿಮ್ಮ ನ್ಯಾಯ ಇಡೀ ರಾತ್ರಿ ನಡೆಯೋದು ತಾನೆ?” ಎಂದು ಹುಸಿನಕ್ಕರು. ವಾಚನ ಮುಂದುವರಿಯಿತು... ಗರಿ ತಾಗಿದರೆ ವೀರರೆಂಬುವರ ಕಾಣೆ, ನಿರಿ ಸೋಕಿದರೆ ಯತಿಯೆಂಬುವರ ಕಾಣೆ... ನಿರ್ವಾಹವಿಲ್ಲದೆ ಆ ಗುಂಪು ಮತ್ತೆ ಮನಸ್ಸಿಲ್ಲದ ಮನಸ್ಸಿನಿಂದ ಆಲಿಸುತ್ತ ಮಂಡಿಸಿತು. ಕಾಲುಗಂಟೆ ಹೀಗೆ ಕಳೆದಿರಬಹುದು. ಹಟಾತ್ತನೆ, ಬರಬಿಜ್ಜಿನಂತೆ ಸುದ್ದಿಯೊಂದು ಆ ಸಭೆಯ ಮೇಲೆರಗಿತು: ನಂಜೇಗೌಡರ ಅಣ್ಣ ಕಪನಯ್ಯನವರು ಇದೀಗ ಶಿವನಪಾದ ಸೇರಿಕೊಂಡರು! ಶಿವಪಾದಪ್ಪನವರ ವಾಚನ ನಿಂತಿತು. ಕಪನಯ್ಯನನ್ನು ಕಂಡರೆ ಊರಿನ ಎಲ್ಲ ಭಕ್ತಾದಿಗಳಿಗಿಂತಲೂ ಅವರಿಗೆ ಪಂಚಪ್ರಾಣ. ಆತ ಮಹಾ ದೈವಭಕ್ತ. ನೇರ ನಡೆ, ನೇರ ನುಡಿ. ಎರಡು ಹೊತ್ತೂ ಶಿವಪೂಜೆ ಮಾಡದೆ ಬಾಯಿಗೆ ನೀರನ್ನೂ ಸೋಕಿಸುತ್ತಿರಲಿಲ್ಲ. ಹತ್ತು ಜನಕ್ಕೆ ಬೇಕಾಗಿದ್ದ ವ್ಯಕ್ತಿ. ಇಂಥ ಪುಣ್ಯಾತ್ಮನ ಸಾವು ಶಿವಪಾದಪ್ಪನವರ ಕಣ್ಣಿನಲ್ಲೂ ನೀರು ತಂದಿತು. ಆದರೆ ಊರಿನಲ್ಲಿ ಕ್ವಾಟೆ ಬುಳ್ಳಪನಂಥ ಒಬ್ಬಿಬ್ಬರು ಕುಹಕಿಗಳು ಕಪನಯ್ಯನ ಬಗ್ಗೆ ಶಿವಪಾದಪ್ಪನವರು ತಳೆದಿದ್ದ ಪ್ರೀತಿಗೆ ಬೇರೆ ಕಾರಣವನೆ ಕೊಡುತ್ತಿದ್ದರು... ಕಪನಯ್ಯನಿಗೆ ಇಬ್ಬರು ಗಂಡುಮಕ್ಕಳು. ಅವರಲ್ಲಿ ಹಿರಿನಾದ ಬಸವಯ್ಯನು ಲಗ್ನವಾದ ಬಳಿಕ ಮೈಸೂರಿಗೆ ತೆರಳಿ ಅಲ್ಲಿಯೇ ಒಂದು ಶಿವಾಚಾರದ ಹೋಟಲು ತೆಗೆದಿದ್ದ. ಬಸವಯ್ಯನ ಹೆಂಡತಿ ಮಲ್ಲಿ ಸ್ವಲ್ಪ ಕಲಿತವಳು. ಬಹಳ ಕಾಲ ಹಳ್ಳಿಯಲ್ಲಿ ಇರಲು ಇಚ್ಚಿಸಲಿಲ್ಲ. ಗಂಡನಿಗೆ ತಗಾದೆ ಮಾಡಿ ಹಳ್ಳಿಯಿಂದ ಅವನನ್ನು ಎಬ್ಬಿಸಿದಳು. ಮೈಸೂರಿನಲ್ಲಿ ಅವಳಿಗೆ ಮೂವರು ಮಕ್ಕಳಾಗಿದ್ದರು. ಯಾವಾಗಲೋ- ಆರು ತಿಂಗಳೊ ವರ್ಷಕ್ಕೊ-ಒಮ್ಮೆ, ಬಸವಯ್ಯ ಹಳ್ಳಿಗೆ ಬಂದು ತಂದೆ ತಾಯಿಯರನ್ನು ನೋಡಿ ಹೋಗುತ್ತಿದ್ದುದುಂಟು. ಕಪನಯ್ಯನ ಇನ್ನೊಬ್ಬ ಮಗ ಚೆನ್ನೂರ ಯಾವುದೊ ನಾಟಕದ ಕಂಪೆನಿ ಸೇರಿ ಊರೂರು ಅಲೆಯುತ್ತಿದ್ದ. ಹಾಗೆ ಅಲೆಯುವಾಗ,