ಈ ಪುಟವನ್ನು ಪ್ರಕಟಿಸಲಾಗಿದೆ

82

ಅ೦ತರ೦ಗವ ನೀನೇ ಬಲ್ಲೆ' ಎಂದು ಬಸವಣ್ಣನವರು ಉಸುರಿರುವದೇನೋ ನಿಜ. ಆದರೆ ಅಂಥ ವೇಷಧಾರಿಗಳನ್ನು ಚೆನ್ನಾಗಿ ಛೀ ಹಾಕಲು ಕೂಡ ಅವರು ಮರೆಯಲಿಲ್ಲ. ಅಂಥ ದಂಡಕರನ್ನು ಹಳಿದು ತಿದ್ದಲು ಅವರು ಯತ್ನಿಸಿದುದುಂಟು.

ಲಿಂಗದಿಚ್ಛೆಗೆ ಮದ್ಯಮಾಂಸವ ತಿಂಬರು
ಕೆಂಗಳಿಚ್ಛೆಗೆ ಪರವಧುವ ನೆರೆವರು,
ಲಿಂಗಲಾಂಛನಧಾರಿಯಾದಲ್ಲಿ ಫಲವೇನು?
ಲಿಂಗಪಥವ ತಪ್ಪಿ ನಡೆದರು,
ಜಂಗಮ ಮುಖದಿಂದ ನಿಂದೆ ಬಂದರೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವ !

ಅದೇ ಕಾಲಕ್ಕೆ ಕೋಮಲ ಅಂತಃಕರಣದ ಬಸವಣ್ಣನವರು, ತಮ್ಮ ಬಿರುನುಡಿಗಳಿಂದ ನೊಂದುಕೊಂಡ ಕೆಲವರನ್ನು ಕೆಳಗೆ ಕಾಣಿಸಿದಂತೆ ಸಂತೈಸಲು ಕೂಡ ಯತ್ನಿಸಿದರು. ಇದೇ ಲೋಕಸಂಗ್ರಹದ ರೀತಿಯಲ್ಲವೇ?

ತಂದೆ ಮಕ್ಕಳಿಗೆ ಬುದ್ಧಿಯ ಹೇಳುವಲ್ಲಿ
ತಪ್ಪಿಂಗೆ ಮುನಿವನಲ್ಲದೆ ಪ್ರಾಣಕ್ಕೆ ಮುನಿಯ.
ಲಿಂಗವಂತನು ಲಿಂಗವಂತಂಗೆ ಬುದ್ದಿಯ ಹೇಳುವಲ್ಲಿ
ಅವಗುಣಕ್ಕೆ ಮುನಿವನಲ್ಲದೆ ಲಾಂಛನಕ್ಕೆ ಮುನಿಯ.
ಲಿಂಗಭಕ್ತನು ಲಿಂಗಭಕ್ತಿಯ ಹೇಳಿದರೆ,
ಮಚ್ಚರಿಸುವರ ಮೆಚ್ಚ ಕೂಡಲಸಂಗಮದೇವ.

ಆದರೆ ಬಸವಣ್ಣನವರ ಈ ಬಗೆಯ ಯತ್ನವು ಪರಿಣಾಮಕಾರಿಯಾಗಲಿಲ್ಲ. ಅವರ ಬಳಗದಲ್ಲಿಯ ತಾಮಸರ ತಿಳಿವು ಸಾಲದ ದುರಭಿಮಾನವು ಭೀಕರವಾದ ಅನಾಹುತವನ್ನು ಆಮಂತ್ರಿಸಿತು. ಅದರ ಫಲವಾಗಿ ಕಲ್ಯಾಣದ ಕೇಂದ್ರವಾದ 'ಕಲ್ಯಾಣವು' ಹಾಳಾಗಿ ಹೋಗಿ, ಬಸವಣ್ಣನವರ ಹಿರಿದಾದ ಮನೋರಥವು ತಾತ್ಕಾಲಿಕವಾಗಿ ಮಣ್ಣುಗೂಡಿತು.