ಈ ಪುಟವನ್ನು ಪ್ರಕಟಿಸಲಾಗಿದೆ
85

ಆದರೆ ಈ ದೂರುಗಳು ಎಡೆಬಿಡದೆ ಸಂತತವಾಗಿ ರಾಯನ ಕಿವಿಯ ಮೇಲೆ ಬೀಳತೊಡಗಿದ್ದರಿಂದ, ಬರಬರುತ್ತ ಆತನ ಮನಸ್ಸಿನಲ್ಲಿ ಬಸವಣ್ಣನವರ ಸದುದ್ದೇಶದ ಬಗೆಗೆ ಸಂದೇಹ ಮೊಳೆಯತೊಡಗಿತು, ಬೆಳೆಯತೊಡಗಿತು. ಅವನು ಬಸವಣ್ಣನವರ ಚಟುವಟಿಕೆಗಳನ್ನು ಸಾಶಂಕದೃಷ್ಟಿಯಿಂದ ಕಾಣತೊಡಗಿದನು.
ಈ ಬಗೆಯಾಗಿ, ಸಂದೇಹದ ಸಿಡಿಮದ್ದು ಜಡಿದು ತುಂಬಿರಲು, ಒಮ್ಮೆಲೇ ಒಂದು ಕಿಡಿಯು ಸಿಡಿಯಿತು. ಬಸವಣ್ಣನವರ ಪ್ರೋತ್ಸಾಹದಿಂದ, ಮಧುವರಸ ಎಂಬ ಬ್ರಾಹ್ಮಣನ ಮಗಳನ್ನು ಹರಳಯ್ಯನೆಂಬ ಅಸ್ಪೃಶ್ಯನ ಮಗನೊಡನೆ ಮದುವೆ ನಡೆಯಿತು. ಅವರಿಬ್ಬರೂ ವೀರಶೈವಮತವನ್ನು ಸ್ವೀಕರಿಸಿದ್ದರು. ಆದುದರಿಂದ ಉಭಯತರು ಸ್ವಸಂತೋಷದಿಂದಲೇ ಈ ವಿವಾಹವನ್ನು ನೆರವೇರಿಸಿದರು. ಆದರೆ ಅದರಿಂದ ವರ್ಣಸಂಗರದ ಈ ಭೀತಿಯು ಸನಾತನಿಗಳನ್ನು ಆವರಿಸಿತು. ಇದನ್ನು ಇನ್ನು ತಡೆಯದಿದ್ದರೆ, ತಮ್ಮ ಧರ್ಮಕ್ಕೆ ಗಂಡಾಂತರ ಒದಗದಿರದು ಎಂದು ಬಗೆದು, ಅವರು ಕೂಡಲೇ ತಮ್ಮ ಹೆದರಿಕೆಯನ್ನು ಬಿಜ್ಜಳರಾಯನಿಗೆ ತಿಳಿಸಿದರು. ಅದನ್ನು ಕೇಳಿ, ವರ್ಣಾಶ್ರಮ ಧರ್ಮವನ್ನೂ ಹಾಗೂ ಉಳಿದೆಲ್ಲ ಧರ್ಮಗಳನ್ನೂ ರಕ್ಷಿಸುವುದು ಅರಸನಾದ ತನ್ನ ಪವಿತ್ರ ಕರ್ತವ್ಯವೆಂದು ಬಗೆದ ಬಿಜ್ಜಳರಾಯನ ಸಹನೆಯು ಆತನ ಅಂಕೆಯನ್ನು ಮೀರಿತು. ಬಸವಣ್ಣನವರ ಸಂಕರಕಾರಕ ಈ ಕೃತ್ಯವನ್ನು ಕಂಡು ಆತನು ಅತೀವ ಕ್ರುದ್ಧನಾದನು. ಮತ್ತು ಕೂಡಲೇ ಇಂಥ ಸಂಕರವನ್ನು ಎಸಗಿದ ಮಧುವರಸ ಮತ್ತು ಹರಳಯ್ಯನವರನ್ನು ಬಂಧಿಸಲು ಆಜ್ಞಾಪಿಸಿ, ಅವರನ್ನು ಕ್ರೂರತನದಿಂದ ಕೊಲ್ಲಿಸಿದನು.
ಆಯಿತು ! ರಾಯನ ಈ ಕ್ರೂರಕೃತ್ಯದಿಂದ ವೀರಶೈವ ಸಮಾಜವೇ ರೋಷಾವೇಶದಿಂದ ಸಿಡಿದೆದ್ದಿತು. ಅವರಲ್ಲಿಯ ಅನೇಕರ ತಲೆ ತಿರುಗಿತು. ಶಿವದ್ರೋಹಿಯಾದ ಬಿಜ್ಜಳನನ್ನು ಕೊಂದುಗಣಪದವಿಯನ್ನು ಪಡೆಯಲು ಅವರು ಸಿದ್ಧರಾದರು. ಈ ಸಂಗತಿಯು ಬಸವಣ್ಣನವರಿಗೂ