ಈ ಪುಟವನ್ನು ಪ್ರಕಟಿಸಲಾಗಿದೆ

118
ಮೇಲಾಗಿ ಇಂಥ ಭೌತಿಕಸುಖವನ್ನಾದರೂ ನೀಡುವವರಾರು ? ಭಗವಂತನನ್ನು ಉಳಿದು ಅದನ್ನು ಅದನ್ನು ಯಾರೂ ನೀಡಲರಿಯರೆಂಬುದನ್ನು ಮರೆಯಲು ಆಗದು. ಬೇರಾರೂ ಅದನ್ನು ಕೊಡಲರಿಯರು. “ಆರಿಗಾರೂ ಇಲ್ಲ ಕೆಟ್ಟವಂಗೆ ಕೆಳ ಇಲ್ಲ ! ಭಗವಂತನೊಬ್ಬನೆ ಜಗದ ನಂಟ, ಆದುದರಿಂದ ಆತನನ್ನೇ ಬೇಡಬೇಕು ಎಂದು ಬಸವಣ್ಣನವರು ಬೋಧಿಸಿರುವರು.
ಲೇಸ ಕಂಡು ಮನ ಬಯಸಿ ಬಯಸಿ
ಆಸೆ ಮಾಡಿದೊಡಿಲ್ಲ ಕಂಡಯ್ಯಾ !
ತಾಳಮರಕ್ಕೆ ಕೈಯ ನೀಡಿ,
ಮೇಲೆ ನೋಡಿ, ಗೋಣು ನೊಂದುದಯ್ಯಾ !
ಕೂಡಲಸಂಗಮದೇವಾ, ಕೇಳಯ್ಯಾ,
ನೀವೀನ ಕಾಲಕ್ಕಲ್ಲದಿಲ್ಲ ಕಂಡಯ್ಯಾ.
ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರ್ಕು
ಹರಿದು ಹೆದ್ದೊರೆಯೆ ಕೆರೆ ತುಂಬಿದಂತಯ್ಯಾ
ನೆರೆಯದ ವಸ್ತು ನೆರೆವುದು ನೋಡಯ್ಯಾ.
ಅರಸು ಪರಿವಾರ ಕೈವಾರ ನೋಡಯ್ಯಾ.
ಪರಮನಿರಂಜನನೆ ಮರೆದ ಕಾಲಕ್ಕೆ ತುಂಬಿದ ಹರವಿಯ
ಕಲ್ಲು ಕೊಂಡಂತೆ, ಕೂಡಲಸಂಗಮದೇವಾ
ಆದುದರಿಂದ
ನೆರೆ ಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡವೋಗದ ಮುನ್ನ
ಹಲ್ಲು ಹೋಗಿ, ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ
ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ
ಮುಪ್ಪಿಂದೊಪ್ಪವಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ
ಪೂಜಿಸು ನಮ್ಮ ಕೂಡಲಸಂಗಮದೇವನ.
ಎಂದು ಬಸವಣ್ಣನವರು ಕಳಕಳಿಯಿಂದ ಬೋಧಿಸಿರುವರು.