ಈ ಪುಟವನ್ನು ಪ್ರಕಟಿಸಲಾಗಿದೆ

16

ಆಶೀರ್ವಚನಗಳು

ಶ್ರೀಮನ್ನಹಾರಾಜ ನಿರಂಜನ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು, ಮೂರುಸಾವಿರ ಮಠ, ಹುಬ್ಬಳ್ಳಿ-

ಆಶೀರ್ವಜನ

ವಿಶ್ವೇಶ್ವರನ ಕೃತಿಯ ವಿಶ್ವ-ರಥ-ಗತಿ ಪಡೆದು,
ವಿಶ್ವಸ್ತ ಕಲ್ಯಾಣ- ಕ್ರಾಂತಿಯಲಿ ಮುನ್ನಡೆದು,
ಕಾಯಕವೇ ಕೈಲಾಸವೆಂಬ ರವಿ ಬಳಿವಿಡಿದು,
ಭಕ್ತಿ-ಚಂದ್ರಿಕೆ ಬೆಳಗಿ, ಮಿಗೆ ಹಗಲಿರುಳು ದುಡಿದು,

ನುಡಿದರೋ, ಮುತ್ತುಗಳ ಹಾರದಂತಿರಬೇಕು ;
ಭಾವಾರ್ಥ : ಮಾಣಿಕದ ದೀಪ್ತಿಯಂತರಿಬೇಕು ;
ಸೂಚನೆಯು : ಸ್ಪಟಿಕದ ಶಲಾಕೆಯಂತಿರಬೇಕು ;
ನುಡಿದಂತೆ ನಿಜವಾದ ನಡೆ-ನಡೆಯುತಿರಬೇಕು.

ಕಳಬೇಡ; ಕೊಲಬೇಡ ; ಹುಸಿಯ ನುಡಿಯಲು ಬೇಡ ;
ತನ್ನ ಬಣ್ಣಿಸಬೇಡ; ಇದಿರು ಹಳಿಯಲೆ ಬೇಡ ;
ಸಿರಿಯಂಬುದೊಂದು ಸಂತೆಯ ಮಂದಿ-ತಡೆ ಬೇಡ ;
ಇದ ನೆಚ್ಚಿ ಕೆಡಬೇಡ : ಮರುಹಿಗೆಡೆಗೊಡಬೇಡ.

ಇತ್ಯಾದಿ ಪರಮಾರ್ಥ ಸಂದೇಶವೀಯುತ್ತ
ಕಾಯದಿಂ ಕಾಯಕದ ಕೈಪಿಡಿಯ ನೀಡುತ್ತ
ವಚನದಿಂ ಶಿವಶರಣತತ್ತ್ವವನು ಬೀರುತ್ತ
ಮನದಿಂದ ಭಕ್ತರನು ತಿದ್ದಿ ಚೇತರಿಸುತ್ತ

ಲೌಕಿಕದ ಜೊತೆಗೆ ಪರಮಾರ್ಥವನು ಸಂಗೊಳಿಸಿ,
ಸಕಲ ಜೀವಾತ್ಮರಿಗೆ ಲೇಸನೇ ಬಯಸಿರುವ -
'ಹಿರಿಯ ಮಾನವ' ಶರಣ ಕಾರಣಿಕ ಜಗದಣ್ಣ
ಬಸವಣ್ಣನವರ ಜೀವನ : ದಿವ್ಯಜೀವನವು.