ಈ ಪುಟವನ್ನು ಪ್ರಕಟಿಸಲಾಗಿದೆ
11

ಅವರು ಸಾಧಕರಾಗಿ ಬೆಳೆಯುತ್ತಿರುವಾಗ, ಹಾಗೂ ಅನುಭಾವವನ್ನು ಪಡೆಯಲಿರುವಾಗ ಅವರ ಅಂತರಂಗದಲ್ಲಿ ಉದಿಸಿದ ಭಾವಲಹರಿಗಳೂ ಅವರು ಪಡೆದ ಅನುಭಾವ-ಆನಂದಗಳೂ ಅವರ ಅಂದವಾದ ವಚನಗಳಲ್ಲಿ ಹೇಗೆ ಮೈದಳೆದವು? ಮುಂದೆ ಪರಮಾತ್ಮನ ಆಣತಿಯ ಮೇರೆಗೆ, ಅವರು ಭಕ್ತವೃಂದವನ್ನು ಬೋಧಿಸಿ, ಅವರನ್ನು ಹೇಗೆ ಉದ್ದರಿಸಿದರು? ಎಂಬುದನ್ನು ಅವರ ವಚನಗಳ ನೆರವಿನಿಂದ ಮುಂದೆ ವಿವರಿಸಲು ಯತ್ನಿಸಲಾಗಿದೆ.

ನಮ್ಮ ಈ ಕಿರಿಚರಿತೆಯಲ್ಲಿ ಮೂಡಿರುವದು ವಿಶೇಷವಾಗಿ ಬಸವಣ್ಣನವರ ಅಂತರಂಗದ ಹಿರಿಮೆ, ಅವರ ಅನುಭಾವದ ಪ್ರಭಾವ. ಹರಿಹರನ 'ಬಸವರಾಜ ದೇವರ ರಗಳೆ' ಅದರ ಪ್ರಧಾನ ಚಾರಿತ್ರಿಕ ಹಿನ್ನೆಲೆ. ಏಕೆಂದರೆ ಬಸವಣ್ಣನವರ ಪರಿಚಯವು ಹರಿಹರ ಕವಿಗೆ ಸಾಕಷ್ಟಿರಬೇಕು; ಬಸವಣ್ಣನವರ ಶ್ರೀಮೂರ್ತಿಯನ್ನು ಅವನು ಕಣ್ಣಾರೆ ಕಂಡಿರಬೇಕು; ಅವರ ವಚನಗಳನ್ನು ಸಾಕಷ್ಟು ಓದಿ, ಕಂಠಪಾಠಮಾಡಿ ಬಸವಣ್ಣನವರ ಜೀವನಚರಿತ್ರ ನಿರೂಪಣೆಗೆ ವಚನಗಳನ್ನು ಹೇರಳವಾಗಿ... ಉಪಯೋಗಿಸಿಕೊಂಡಿರಬೇಕು. ಆದರೆ ಬಸವಣ್ಣನವರ ಹಾಗೂ ಬೇರೆ ಶರಣರ ವಚನಗಳೇ ಅದರ ಪ್ರಧಾನ ಆಧಾರ. ಅವನ್ನೆಲ್ಲ ಚೆನ್ನಾಗಿ ಹೊಂದಿಸಿಕೊಳ್ಳಲು ನಾವು ಪಡೆದುದು ಕೊಂಚ ಕೆಲ ಪುರಾಣಗಳ ನೆರವು, ಕೊಂಚ ಕಲ್ಪನೆಗಳ ಬೆಂಬಲ. ಈ ಕೆಲ ಸಾಧನಗಳಿಂದ ಬಸವಣ್ಣನವರ ದಿವ್ಯಜೀವನವು ಇಲ್ಲಿ ಚಿತ್ರಿಸಲಾಗಿದೆ. ಸಹೃದಯರು ಇದರ ಗುಣಾವಗುಣಗಳನ್ನು ಗುರುತಿಸಲಿ! ಗುಣಗಳಿಂದ ನಲಿಯಲಿ! ಅವಗುಣಗಳನ್ನು ಅರುಹಲಿ! ಅಂದರೆ ಅವನ್ನು ಮುಂದೆ ತೊರೆಯಲು ಅನುಕೂಲ ಆಗಬಹುದು. ಇದೇ ಅವರಲ್ಲಿ ವಿನಮ್ರ ಬಿನ್ನಹ.

೬. ಧ.ಬ. ಪು. ೪