ಈ ಪುಟವನ್ನು ಪ್ರಕಟಿಸಲಾಗಿದೆ
51

ಅವರು ಸಿದ್ಧರಸನನ್ನು ತುಂಬ ಕೊಂಡಾಡಿದರು. ಈಶಾನ್ಯ ಗುರುಗಳು ನವದಂಪತಿಗಳನ್ನು ಆನಂದಾಶ್ರುಗಳಿಂದ ಆಶೀರ್ವದಿಸಿ, ಸಿದ್ಧರಸನನ್ನು ಹರಿಸಿ, ಮರಳಿ ಸಂಗಮಕ್ಷೇತ್ರಕ್ಕೆ ತೆರಳಿದರು. ಅಕ್ಕ-ಭಾವ ಇಬ್ಬರೂ ಬಸವಣ್ಣನ ವೈಭವವನ್ನು ಕಂಡು ಅತೀವ ಪ್ರಮುದಿತರಾದರು. ಬಸವಣ್ಣನವರು ಮಡದಿಯೊಡನೆಯೂ ತಮ್ಮ ಅಕ್ಕಭಾವಂದಿರೊಡನೆಯೂ ಸಿದ್ದರಸನ ಮಹಾಮನೆಯ ಒಂದು ಭಾಗದಲ್ಲಿಯೇ ಸ್ವತಂತ್ರವಾಗಿ ಸಂಸಾರವನ್ನು ಹೂಡಿದರು. ಅದರಿಂದ ಸಿದ್ದರಸ ದಂಪತಿಗಳಿಗೆ ಆನಂದಕ್ಕಂತೂ ಮೇರೆಯೇ ಇರಲಿಲ್ಲ. ಸಂಗನ ಕರುಣದ ಹಾಗೂ ನೆಚ್ಚಿನ ಅತ್ತೆಮಾವಂದಿರ ಒಲವಿನ ನೆರಳಿನಲ್ಲಿ ಬಸವಣ್ಣನವರ ವೈವಾಹಿಕ ಜೀವನವು ಸಂತಸದಿಂದ ಸಾಗಿತು. ಕಾಲಕ್ರಮದಲ್ಲಿ ಗಂಗಾದೇವಿಯು ಗರ್ಭವತಿಯಾಗಿ ಗಂಡುಮಗುವನ್ನು ಹೆತ್ತಳು. ಸಂಗಮನಾಥನ ಕರುಣದ ಕಂದನಾದುದರಿಂದ ಮಗುವಿಗೆ 'ಸಂಗ' ಎಂದು ಹೆಸರಿಡಲಾಯಿತು. ಮೊಮ್ಮಗನನ್ನು ಕಾಣುವ ಸುಯೋಗ ಲಭಿಸಿದುದರಿಂದ ಅಜ್ಜ-ಅಜ್ಜಿಯರ ಹರ್ಷವು ಇಮ್ಮಡಿಯಾಯಿತು. ತಾವು ಧನ್ಯರಾದೆವು. ತಮ್ಮ ಜೀವನವು ಸಫಲವಾಯಿತು ಎಂದು ಅವರಿಗನಿಸಿತು.
ಈ ರೀತಿ ಅವರೆಲ್ಲರೂ ಅತ್ಯಾನಂದದಲ್ಲಿ ಕೆಲ ಕಾಲ ಕಳೆದರು. ಆದರೆ ಆ ಆನಂದವು ಅವರಿಗೆ ಬಹುಕಾಲ ಲಭಿಸಲಿಲ್ಲ ಮುಂದೆ ಒಂದೆರಡು ವರ್ಷಗಳಲ್ಲಿಯೇ ಉಭಯತರಿಗೆ ಪರಶಿವನಿಂದ ಕರೆಯು ಬಂದುದರಿಂದ ಅವರು ಕೈಲಾಸಕ್ಕೆ ತೆರಳಿದರು. ಮೊದಲು ಅತ್ತೆಯವರು ಹೋದರು. ತರುವಾಯ ಸಿದ್ಧರಸನು ತೆರಳಿದನು. ಬಸವಣ್ಣನವರಿಗೂ ಗಂಗಾದೇವಿಗೂ ಅತೀವ ದುಃಖ ಆಯಿತು. ಬಿಜ್ಜಳರಾಯನಿಗೂ ಸಿದ್ಧರಸನಲ್ಲಿ ಆದರ-ವಿಶ್ವಾಸಗಳು ತುಂಬ ನೆಲೆಸಿದ್ದರಿಂದ ಆತನ ನಿಧನದಿಂದ ಬಿಜ್ಜಳರಾಯನು ಬಹಳ ಮರುಗಿದನು. ಸಿದ್ಧರಸನು ಅತಿ ದಕ್ಷ ಮಂತ್ರಿಯಾಗಿದ್ದನು. ಆತನ ಸಮರ್ಥ ನೆರವಿನಿಂದಲೇ ಬಿಜ್ಜಳನ ಆಸನವು ಭದ್ರವಾಗಿದ್ದಿತು. ಇಂಥ ಬಲವಂತನೂ ಬುದ್ಧಿವಂತನೂ ಆದ ದಂಡನಾಯಕನ ಬೆಂಬಲವು ಅಳಿದದ್ದರಿಂದ ರಾಯನಿಗೆ ತುಂಬ ವ್ಯಸನ ಆದುದು ಸ್ವಾಭಾವಿಕ.